ನವದೆಹಲಿ: ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಮೂಲಕ ಸಶಸ್ತ್ರ ಪಡೆಗೆ ಮಹಿಳೆಯರನ್ನು ಸೇರಿಸಲು ಅನುಮತಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ನ್ಯಾಯಪೀಠವು, ಎನ್‌ಡಿಎಗೆ ಮಹಿಳೆಯರನ್ನು ಸೇರಿಸಲು ಸಶಸ್ತ್ರ ಪಡೆಗಳು ಸ್ವತಃ ನಿರ್ಧಾರಗಳನ್ನು ಕೈಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿತು.
ಕೇಂದ್ರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಮೂವರು ಸೇವಾ ಮುಖ್ಯಸ್ಥರೊಂದಿಗೆ ಸಮಾಲೋಚಿಸಿದ ನಂತರ ಕೇಂದ್ರ ಸರ್ಕಾರ ನಿನ್ನೆ ಈ ನಿರ್ಧಾರ ಕೈಗೊಂಡಿದೆ ಎಂದು ಪೀಠಕ್ಕೆ ತಿಳಿಸಿದರು.
"ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮೂಲಕ ಮಹಿಳೆಯರನ್ನು ಖಾಯಂ ಆಯೋಗಕ್ಕೆ ಸೇರಿಸುವ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ" ಎಂದು ಎಎಸ್‌ಜಿ ಭಾಟಿ ತಿಳಿಸಿದರು.
ಅಫಿಡವಿಟ್ ಮೂಲಕ ಹೇಳಿಕೆಯನ್ನು ದಾಖಲಿಸಲು ಸುಪ್ರೀಂಕೋರ್ಟ್ ಎಎಸ್‌ಜಿ ಭಾಟಿಯವರನ್ನು ಕೋರಿತು, ಮತ್ತು ವಿಚಾರಣೆಯನ್ನು ಸೆಪ್ಟೆಂಬರ್ 22ರಂದು ವಿಚಾರಣೆಯನ್ನು ಮುಂದೂಡಲಾಯಿತು. ಎನ್‌ಡಿಎ ಪರೀಕ್ಷೆಗಳಲ್ಲಿ ಮಹಿಳೆಯರಿಗೆ ಭಾಗವಹಿಸಲು ಅವಕಾಶ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯವು ಆಲಿಸುತ್ತಿತ್ತು. ಈ ಹಿಂದೆ, ಸುಪ್ರೀಂಕೋರ್ಟ್ ಮಧ್ಯಂತರ ಆದೇಶದಲ್ಲಿ ಮಹಿಳೆಯರಿಗೆ ಸೆಪ್ಟೆಂಬರ್ 5ಕ್ಕೆ ನಿಗದಿಯಾಗಿದ್ದ ಎನ್‌ಡಿಎ ಪರೀಕ್ಷೆಯನ್ನು ತೆಗೆದುಕೊಳ್ಳಲು ಅವಕಾಶ ನೀಡಿತ್ತು.
ಈ ಹಿಂದೆ, ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ) ಪ್ರವೇಶ ಪರೀಕ್ಷೆಗಳಲ್ಲಿ ಮಹಿಳೆಯರಿಗೆ ಭಾಗವಹಿಸಲು ಅವಕಾಶ ನೀಡದಿರುವುದಕ್ಕೆ ಭಾರತೀಯ ಸೇನೆಯನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಸೇನೆಯ 'ನೀತಿ, ನಿರ್ಧಾರ' ಲಿಂಗ ತಾರತಮ್ಯವನ್ನು ತೋರಿಸುತ್ತಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿತ್ತು.
ಇಂದು, ಎಎಸ್‌ಜಿ ಮಹಿಳೆಯರನ್ನು ಎನ್‌ಡಿಎಗೆ ಸೇರಿಸಲಾಗುವುದು ಮತ್ತು ಪರೀಕ್ಷೆಯನ್ನು ನವೆಂಬರ್ 24, 2021 ಕ್ಕೆ ಮುಂದೂಡಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಇದನ್ನೂ ಓದಿ:ಎನ್‌ಡಿಎ ಪರೀಕ್ಷೆಗಳಲ್ಲಿ ಭಾಗವಹಿಸಲು ಮಹಿಳೆಯರಿಗೆ ಅವಕಾಶ ನೀಡಿದ ಸುಪ್ರೀಂಕೋರ್ಟ್