ಮೇಡ್ಚಲ್(ತೆಲಂಗಾಣ):ಗಂಡನ ಮನೆಯವರ ದೈಹಿಕ, ಮಾನಸಿಕ ಕಿರುಕುಳಕ್ಕೆ ಬೇಸತ್ತಿರುವ ಮಹಿಳೆ ಆತ್ಮಹತ್ಯೆ ಹಾದಿ ತುಳಿದ ಘಟನೆ ತೆಲಂಗಾಣದ ಮೇಡ್ಚಲ್ನಲ್ಲಿ ನಡೆದಿದೆ.
ಮೇದಕ್ ಜಿಲ್ಲೆಯ ಶಿವಂಪೇಟ್ ಮಂಡಲದ ನಿಖಿತಾ (25) ಕಳೆದ ಜೂನ್ 14ರಂದು ಚಿಂತಾಲ್ನಲ್ಲಿ ನೆಲೆಸಿರುವ ಸಾಫ್ಟ್‌ವೇರ್ ಉದ್ಯೋಗಿ ಮಹೇಂದರ್ ಅವರನ್ನು ವಿವಾಹವಾಗಿದ್ದರು. ಮದುವೆ ಸಂದರ್ಭದಲ್ಲಿ 5 ಲಕ್ಷ ರೂ. ವರದಕ್ಷಿಣೆಯನ್ನೂ ನೀಡಿದ್ದರು. ಮದುವೆಯಾದ ಸ್ವಲ್ಪ ಸಮಯದ ನಂತರ ಆಕೆಗೆ ಗಂಡನೊಂದಿಗೆ ಜಗಳ ಶುರುವಾಗಿದೆ. ನಂತರದ ದಿನಗಳಲ್ಲಿ ಗಂಡನ ಮನೆಯ ಎಲ್ಲರೂ ನಿಖಿತಾಗೆ ಮನೆಯ ಎಲ್ಲ ಕೆಲಸಗಳನ್ನೂ ಮಾಡುವಂತೆ ಶೋಷಣೆ ಮಾಡಲು ಶುರುಮಾಡಿದ್ದಾರಂತೆ. ಈ ಬಗ್ಗೆ ಅನೇಕ ಸಲ ಹೆತ್ತವರ ಮುಂದೆಯೂ ನಿಖಿತಾ ನೋವು ತೋಡಿಕೊಂಡಿದ್ದರು.
ಆತ್ಮಹತ್ಯೆಗೆ ಶರಣಾಗಿರುವ ನವ ವಿವಾಹಿತೆ ನಿಖಿತಾ ಈ ತಿಂಗಳ 20ರಂದು ನಿಖಿತಾ ತನ್ನ ಪೋಷಕರಿಗೆ ಕರೆ ಮಾಡಿ ತಮ್ಮೊಂದಿಗೆ ಕರೆದುಕೊಂಡು ಹೋಗುವಂತೆ ಮನವಿ ಮಾಡಿದ್ದರು. ಅದರಂತೆ ಸಹೋದರ ಅಲ್ಲಿಗೆ ತೆರಳುವಷ್ಟರಲ್ಲಿ ಮನೆಯ ಎಲ್ಲರೂ ಅಳುತ್ತಿರುವುದು ಕಂಡು ಬಂದಿದೆ. ಈ ವೇಳೆ ಏನಾಯಿತು ಎಂದು ಕೇಳಿದಾಗ ನಿಖಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಭಾರತವನ್ನು 'ತಾಲಿಬಾನ್' ಮಾಡಲು ಬಿಡುವುದಿಲ್ಲ: ಕೇಂದ್ರ ಸರ್ಕಾರದ ವಿರುದ್ಧ ಮಮತಾ ವಾಗ್ದಾಳಿ
ಮಗಳ ಶವ ನೋಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕುಟುಂಬಸ್ಥರು ಗಂಡನ ಮನೆಯವರು ನಮ್ಮ ಮಗಳಿಗೆ ಬೆಂಕಿ ಹಚ್ಚಿ ಕೊಲೆಗೈದಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.