ಕರ್ನಾಟಕ

karnataka

ದೆಹಲಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ: ಪೊಲೀಸರ ಮೇಲೆಯೇ ಖಾರದ ಪುಡಿ ಎರಚಿದ ಮಹಿಳೆಯರು

By

Published : Feb 12, 2023, 6:08 PM IST

ದೆಹಲಿಯಲ್ಲಿ ಮೆಹ್ರೌಲಿ ಪುರಾತತ್ವ ಉದ್ಯಾನವನ ಪ್ರದೇಶದ ಒತ್ತುವರಿ ತೆರವು ಕಾರ್ಯಾಚರಣೆ- ಸ್ಥಳದಲ್ಲಿ ಗೊಂದಲದ ವಾತಾವರಣ - ಪೊಲೀಸರು ಮತ್ತು ಮಹಿಳಾ ಪ್ರತಿಭಟನಾಕಾರರ ನಡುವೆ ವಾಗ್ವಾದ

women-protesters-throw-chilli-powder-at-police-during-ddas-demolition-drive-detained
ಪುರಾತತ್ವ ಉದ್ಯಾನವನದ ಒತ್ತುವರಿ ತೆರವು ಕಾರ್ಯ: ಪೊಲೀಸರ ಮೇಲೆ ಖಾರದ ಪುಡಿ ಎರಚಿದ ಮಹಿಳೆಯರು

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಭಿವೃದ್ಧಿ ಪ್ರಾಧಿಕಾರವು ಅತಿಕ್ರಮಣ ತೆರವು ಕಾರ್ಯಾಚರಣೆ ಆರಂಭಿಸಿದ್ದು, ಸ್ಥಳೀಯ ನಿವಾಸಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ವೇಳೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿ ಮೇಲೆಯೇ ಖಾರದ ಪುಡಿ ಎರಚಿದ ಆರೋಪದ ಮೇಲೆ ಕೆಲವು ಮಹಿಳಾ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ.

ಇಲ್ಲಿನ ಮೆಹ್ರೌಲಿ ಪುರಾತತ್ವ ಉದ್ಯಾನವನದ ಪ್ರದೇಶದಲ್ಲಿ ಶುಕ್ರವಾರದಿಂದ ಪೊಲೀಸ್ ಭದ್ರತೆಯ ನಡುವೆ ಅತಿಕ್ರಮಣ ತೆರವು ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ. ಇದುವರೆಗೆ ಸುಮಾರು 1,200 ಚದರ್​ ಮೀಟರ್ ಸರ್ಕಾರಿ ಭೂಮಿಯನ್ನು ಮರು ಪಡೆಯಲಾಗಿದೆ ಎಂದು ಡಿಡಿಎ ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದೆಡೆ, ಈ ತೆರವು ಕಾರ್ಯಾಚರಣೆ ವಿರುದ್ಧ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ, ದೆಹಲಿ ಆಡಳಿತಾರೂಢ ಆಮ್​ ಆದ್ಮಿ ಪಕ್ಷ (ಎಎಪಿ) ಮತ್ತು ಬಿಜೆಪಿ ನಡುವೆ ರಾಜಕೀಯ ಕೆಸರೆರೆಚಾಟಕ್ಕೂ ಕಾರಣವಾಗಿದೆ.

ಭಾನುವಾರ ಕೂಡ ಮಹಿಳೆಯರ ಗುಂಪು ನೆಲಸಮ ಕಾರ್ಯಾಚರಣೆಯ ವಿರುದ್ಧ ಪ್ರತಿಭಟನೆ ಮುಂದುವರೆಸಿದ್ದಾರೆ. ಈ ಸಮಯದಲ್ಲಿ ಸ್ಥಳದಲ್ಲಿ ನಿಯೋಜಿಸಲಾದ ಪೊಲೀಸರು ತಮ್ಮ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಪ್ರತಿಭಟನಾನಿರತ ಮಹಿಳೆಯರು ಆರೋಪಿಸಿದರು. ಆದರೆ, ಈ ಆರೋಪವನ್ನು ಹಿರಿಯ ಅಧಿಕಾರಿಯೊಬ್ಬರು ತಳ್ಳಹಾಕಿದ್ದು, ಯಾವುದೇ ಲಾಠಿ ಚಾರ್ಜ್ ಆಗಿಲ್ಲ. ಇದರಲ್ಲಿ ಯಾರಿಗೂ ಗಾಯಗಳು ಕೂಡ ಆಗಿಲ್ಲ ಎಂದು ಹೇಳಿದ್ದಾರೆ.

ಆದರೆ, ಪ್ರತಿಭಟನಕಾರರೇ ಡಿಡಿಎ ಸಿಬ್ಬಂದಿ ಹಾಗೂ ಪೊಲೀಸರ ಕತ್ಯರ್ವಕ್ಕೆ ಅಡ್ಡಿಪಡಿಸಿದರು. ಅಲ್ಲದೇ, ಕೆಲವು ಮಹಿಳೆಯರು ಪೊಲೀಸ್ ಸಿಬ್ಬಂದಿ ಮೇಲೆ ಕೆಂಪು ಮೆಣಸಿನ ಪುಡಿಯನ್ನು ಎರಚಿದ್ದಾರೆ. ಖಾರದ ಪುಡಿ ಎಸೆದ ಕೆಲವರನ್ನು ಗುರುತಿಸಲಾಗಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಬಹುಮಹಡಿ ಕಟ್ಟಡಗಳ ನಿರ್ಮಾಣ ಆರೋಪ: ಈ ಹಿಂದೆ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಐತಿಹಾಸಿಕ ಉದ್ಯಾನವನದ ಅತಿಕ್ರಮಣವನ್ನು ದೆಹಲಿ ಹೈಕೋರ್ಟ್ ಗಮನಿಸಿದೆ. ಫೆ.10ರಿಂದ ತೆರವು ಕಾರ್ಯಾಚರಣೆ ಆರಂಭಿಸಲಾಗಿದ್ದು, ಅಂದಾಜು 1,200 ಚದರ ಮೀಟರ್ ಸರ್ಕಾರಿ ಮತ್ತು ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಭೂಮಿಯನ್ನು ಅತಿಕ್ರಮಣದಾರರಿಂದ ಮರು ಪಡಿಸಿಕೊಳ್ಳಲಾಗಿದೆ. ಉಳಿದ ಅತಿಕ್ರಮಿತ ಸರ್ಕಾರಿ ಭೂಮಿಯನ್ನು ಮರಳಿ ಪಡೆಯಲು ಕಾರ್ಯಾಚರಣೆ ಮುಂದುವರೆದಿದೆ ಎಂದು ಮತ್ತೊಬ್ಬ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಈ ಪ್ರದೇಶದ ಲಾಧಾ ಸರಾಯ್ ಗ್ರಾಮ ಕಳೆದ ಕೆಲವು ದಶಕಗಳಲ್ಲಿ ಅನೇಕ ಜನರು ಅನಧಿಕೃತ ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ. ಕೆಲವರು ಐದಾರು ಅಂತಸ್ತಿನ ಕಟ್ಟಡಗಳನ್ನೂ ನಿರ್ಮಿಸಿದ್ದಾರೆ. ಈ ಅತಿಕ್ರಮಣದ ಕುರಿತಾಗಿ ಕಳೆದ ಡಿಸೆಂಬರ್‌ 12ರಂದು 10 ದಿನದೊಳಗೆ ಅನಧಿಕೃತ ನಿರ್ಮಾಣಗಳನ್ನು ಸ್ವಯಂ ಪ್ರೇರಿತವಾಗಿ ಖಾಲಿ ಮಾಡುವಂತೆ ನೋಟಿಸ್ ಜಾರಿ ಮಾಡಲಾಗಿತ್ತು. ಅಲ್ಲದೇ, ಎಚ್ಚರಿಕೆ ಕ್ರಮವಾಗಿ ಮನೆಗಳು ಮತ್ತು ಕಟ್ಟಡಗಳ ಗೋಡೆ ಮೇಲೆ ಈ ನೋಟಿಸ್​ಗಳನ್ನು ಅಂಟಿಸಲಾಗಿತ್ತು ಎಂದು ಎಂದು ಹಿರಿಯ ಡಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು, ವಿಸ್ತಾರವಾದ ಮೆಹ್ರೌಲಿ ಉದ್ಯಾನವನವು ಐತಿಹಾಸಿಕ ಸ್ಮಾರಕಗಳಿಂದ ಕೂಡಿದೆ. ಈ ಪ್ರದೇಶವು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಬರುತ್ತದೆ. ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯ ಹೊಣೆಯು ಭಾರತೀಯ ಪುರಾತತ್ವ ಇಲಾಖೆ ಮೇಲಿದೆ. ಇದೇ ಉದ್ಯಾನವನದಲ್ಲಿ ಮಾರ್ಚ್​ನಲ್ಲಿ ಜಿ-20 ಸಭೆ ನಡೆಸಲು ಉದ್ದೇಶಿಸಲಾಗಿದೆ. ಅಲ್ಲದೇ, ಅತಿಕ್ರಮಣ ತೆರವು ಮಾಡುವ ಮೂಲಕ ಮೆಹ್ರಾಲಿ ಪುರಾತತ್ವ ಉದ್ಯಾನವನದ ವ್ಯಾಪ್ತಿಯಲ್ಲಿ ಬರುವ ಪ್ರದೇಶವನ್ನು ಸಂರಕ್ಷಿಸಲು ದೆಹಲಿ ಹೈಕೋರ್ಟ್ ಹಲವು ಬಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ಇದನ್ನೂ ಓದಿ:ಅಲ್ಲಾ ಮತ್ತು ಓಂ ಒಂದೇ ಎಂದ ಮದನಿ: ಧಾರ್ಮಿಕ ಮುಖಂಡರ ಅಸಮಾಧಾನ

ABOUT THE AUTHOR

...view details