ಬೊಕಾರೊ (ಜಾರ್ಖಂಡ್): ನಾಡಿನೆಲ್ಲೆಡೆ ದೇವಿಯರ ಹಬ್ಬ ನವರಾತ್ರಿ ಆಚರಿಸಲಾಗುತ್ತಿದೆ. ಆದರೆ, ಜಾರ್ಖಂಡ್ನ ಬೊಕಾರೊದ ಕಸ್ಮಾರ್ನಲ್ಲಿರುವ ಮಂಗಳ ಚಂಡಿ ದೇವಸ್ಥಾನ, ಸ್ತ್ರೀ ಶಕ್ತಿಯಾದ ದುರ್ಗಾದೇವಿಯನ್ನು ಆರಾಧಿಸುವ ದೇವಾಲಯಕ್ಕೆ ಮಹಿಳೆಯರಿಗೇ ಪ್ರವೇಶ ನಿಷೇಧಿಸಲಾಗಿದೆ. ಈ ದೇವಸ್ಥಾನಕ್ಕೆ ಪುರುಷರು ಮಾತ್ರ ಪ್ರವೇಶಿಸಬಹುದು. ಇಲ್ಲಿ ಮಹಿಳೆಯರು ದೇವಸ್ಥಾನದಿಂದ 100 ಮೀಟರ್ ದೂರದಲ್ಲಿ ನಿಂತು ದೇವಿ ಪೂಜಿಸುತ್ತಾರೆ
ಅರ್ಚಕ ವಿವೇಕ್ ಕುಮಾರ್ ಪ್ರಕಾರ, ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶವನ್ನು ತಡೆಯುವ ಸಂಪ್ರದಾಯ ಹಲವು ದಶಕಗಳಿಂದ ನಡೆದುಕೊಂಡು ಬಂದಿದೆ. ಮಹಿಳೆಯರೂ ಸಹ ಈ ನಿಯಮವನ್ನು ವಿರೋಧಿಸದೇ, ದೂರದಿಂದ ಪೂಜೆ ಮಾಡುತ್ತಾರೆ. ದೂರದಿಂದಲೇ ಪೂಜೆ ಮಾಡಿದರೂ ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎಂದು ಅವರು ನಂಬಿದ್ದಾರೆ. ಮಹಿಳೆಯರು ಅರ್ಪಿಸುವ ಕಾಣಿಕೆಗಳನ್ನು ಪುರುಷರು ಅರ್ಪಿಸುತ್ತಾರೆ.
ಕೇರಳದ ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ 12ರಿಂದ ವರ್ಷದ ಮಹಿಳೆಯರಿಗೆ ದೇವಸ್ಥಾನದ ಒಳಗೆ ಪ್ರವೇಶವಿಲ್ಲ. ಶಬರಿಮಲೆಯ ಕಾರಣವೇ ಬೇರೆ. ಆದರೆ ಇಲ್ಲಿನ ಆಚರಣೆಗೆ ನಿಖರವಾದ ಕಾರಣ ಗೊತ್ತಿಲ್ಲವಾದರೂ, ಸ್ಥಳೀಯರ ಪ್ರಕಾರ, ಹಲವು ವರ್ಷಗಳ ಹಿಂದೆ ಮಹಿಳೆಯೊಬ್ಬರು ದೇವಾಲಯಕ್ಕೆ ಪ್ರವೇಶಿಸಿ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದರಂತೆ. ನಂತರದಲ್ಲಿ ಈ ನಿಷೇಧದ ಬಗ್ಗೆ ಜನರು ಹೆಚ್ಚು ತಲೆಕೆಡಿಸಿಕೊಳ್ಳದೇ ಅದನ್ನು ಒಪ್ಪಿಕೊಂಡೇ ಪ್ರತೀವರ್ಷ ನೂರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಪುರುಷರು ದೇವಸ್ಥಾನದ ಒಳಗೆ ಹೋದರೆ, ಮಹಿಳೆಯರು ದೇವಸ್ಥಾನ ಹೊರಗೆ ನಿಂತು ಪ್ರಾರ್ಥಿಸುತ್ತಾರೆ.
ದೇವಿ ಬಯಲು ಪ್ರದೇಶದಲ್ಲಿ ಇರಲು ಬಯಸುತ್ತಾಳೆ. ಹಾಗಾಗಿ ದೇವಿಗೆ ಪ್ರತ್ಯೇಕವಾಗಿ ಯಾವುದೇ ದೇವಾಲಯವನ್ನು ನಿರ್ಮಿಸಿಲ್ಲ. ಈ ಆಚರಣೆ ಯಾವಾಗಿನಿಂದ ನಡೆದುಕೊಂಡು ಬರುತ್ತಿದೆ ಎಂಬುದರ ಬಗ್ಗೆ ನಮಗೆ ಮಾಹಿತಿ ಇಲ್ಲ. ನಾವು ಇದನ್ನು ಧಾರ್ಮಿಕವಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಈ ದುರ್ಗಾದೇವಿ ಬಹಳ ಶಕ್ತಿಶಾಲಿ ಹಾಗಾಗಿ ಪುರುಷರು ಮಾತ್ರ ದೇವಾಲಯದ ಒಳಗೆ ಪ್ರವೇಶಿಸಿ ಪೂಜಿಸುತ್ತಾರೆ ಮಹಿಳೆಯರು ದೂರದಲ್ಲೇ ನಿಂತು ತಾಯಿಯನ್ನು ಬೇಡಿಕೊಳ್ಳುತ್ತಾರೆ ಎನ್ನುತ್ತಾರೆ ಅರ್ಚಕರು.