ನವದೆಹಲಿ: 'ನಾರಿ ಶಕ್ತಿ ವಂದನ್ ಮಸೂದೆ' ಅಂಗೀಕಾರವಾದ ಹಿನ್ನೆಲೆಯಲ್ಲಿ ರಾಷ್ಟ್ರದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ಮಹಿಳಾ ಸಂಸದರು ಪ್ರಧಾನಿ ಮೋದಿ ಪರ ಘೋಷಣೆಗಳನ್ನು ಮೊಳಗಿಸಿ ಹೂಗುಚ್ಚ ನೀಡುವ ಮೂಲಕ ಕೃತಜ್ಞತೆ ಸಲ್ಲಿಸಿದರು. ಪಿ.ಟಿ.ಉಷಾ ಮತ್ತು ಕೇಂದ್ರ ಸಚಿವರಾದ ಮೀನಾಕ್ಷಿ ಲೇಖಿ ಮತ್ತು ಸ್ಮೃತಿ ಇರಾನಿ ಸೇರಿದಂತೆ ಉಭಯ ಸದನಗಳ ಮಹಿಳಾ ಸದಸ್ಯರು ಮೋದಿ ಅವರಿಗೆ ಧನ್ಯವಾದ ಸಲ್ಲಿಸಿ ಫೋಟೋ ಕ್ಲಿಕ್ಕಿಸಿಕೊಂಡರು.
ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ವಿಧೇಯಕ ಗುರುವಾರ ರಾಜ್ಯಸಭೆಯಲ್ಲಿ ಅವಿರೋಧವಾಗಿ ಅಂಗೀಕಾರಗೊಂಡಿತು. 214 ಸದಸ್ಯರು ಬೆಂಬಲವಾಗಿ ಮತ ಚಲಾಯಿಸಿದರು. ಮಸೂದೆಯ ವಿರುದ್ಧ ಯಾರೂ ಮತ ಹಾಕದಿರುವುದು ವಿಶೇಷವಾಗಿತ್ತು.
'ನಾರಿ ಶಕ್ತಿ ವಂದನ್ ಮಸೂದೆ' ಮಂಗಳವಾರ ಹೊಸ ಸಂಸತ್ತಿನ ಕಟ್ಟಡಕ್ಕೆ ಸ್ಥಳಾಂತರಗೊಂಡ ನಂತರ ಸಂಸತ್ತು ಅಂಗೀಕರಿಸಿದ ಮೊದಲ ಮಸೂದೆಯಾಗಿದೆ. ಇದಕ್ಕೂ ಮೊದಲು, ಬುಧವಾರ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದು, ಪರವಾಗಿ 454 ಮತಗಳು ಮತ್ತು 2 ಮತಗಳು ವಿರುದ್ಧವಾಗಿ ಬಿದ್ದಿದ್ದವು. ಮಸೂದೆ ಅಂಗೀಕಾರಕ್ಕೆ ಮಹಿಳಾ ಸಂಸದರು ಸಂತಸ ವ್ಯಕ್ತಪಡಿಸಿದರು.