ನವದೆಹಲಿ:ಲಿಂಗ ತಾರತಮ್ಯ ನೀತಿ ತೊಡೆದು ಹಾಕಲು ಭಾರತೀಯ ಸೇನೆ ದಿಟ್ಟ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ವಿಶೇಷ ಆಯ್ಕೆ ಮಂಡಳಿಯು ಮಹಿಳಾ ಅಧಿಕಾರಿಗಳನ್ನು ಲೆಫ್ಟಿನೆಂಟ್ ಕರ್ನಲ್ ಹುದ್ದೆಯಿಂದ ಕರ್ನಲ್ ಹುದ್ದೆಗೇರಿಸಲು ಮುಂದಾಗಿದೆ. ಈ ಮೂಲಕ ಭಾರತೀಯ ಸೇನೆಯಲ್ಲಿ ಪುರುಷ ಸಹವರ್ತಿಗಳಿಗೆ ಸಮನಾಗಿ ಮಹಿಳೆಯರನ್ನೂ ತರಲು ಸೇನೆ ಮುಂದಾಗಿದೆ. ಇದೇ ಜನವರಿ 9 ರಿಂದ 22 ರವರೆಗೆ ಈ ಬಡ್ತಿ ಪ್ರಕ್ರಿಯೆ ನಡೆಯಲಿದೆ.
ಖಾಲಿ ಇರುವ 108 ಬಡ್ತಿ ಹುದ್ದೆಗಳಿಗೆ 244 ಮಹಿಳಾ ಅಧಿಕಾರಿಗಳನ್ನು ಪರಿಗಣಿಸಲಾಗುವುದು. ಸೇನೆಯ ವಿವಿಧ ಶಸ್ತ್ರಾಸ್ತ್ರ ಮತ್ತು ಸೇವೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ (ಇಂಜಿನಿಯರಿಂಗ್, ಸಿಗ್ನಲ್, ವಾಯು ರಕ್ಷಣಾ, ಗುಪ್ತಚರ ಕೋರ್, ಸೇನಾ ಸೇವಾ ಕೋರ್, ಸೇನಾ ಆರ್ಡಿನ್ಸ್ ಕೋರ್ ಮತ್ತು ಎಲೆಕ್ಟ್ರಾನಿಕ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್) 1992ರಿಂದ 2006 ಬ್ಯಾಚ್ನ ಅಧಿಕಾರಿಗಳನ್ನು ಸೇನೆ ಪರಿಗಣನೆಗೆ ತೆಗೆದುಕೊಳ್ಳಲಿದೆ.