ಪಾಣಿಪತ್(ಹರಿಯಾಣ):ಕುಸ್ತಿ ಅಭ್ಯಾಸ ನಡೆಸಿ, ಯಮುನಾ ನದಿಯಲ್ಲಿ ಸ್ನಾನ ಮಾಡಲು ಹೋದ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಹಲವು ಪದಕಗಳನ್ನು ಗೆದ್ದಿದ್ದ ಮಹಿಳಾ ಕುಸ್ತಿಪಟುವೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹರಿಯಾಣದ ಪಾಣಿಪತ್ ಜಿಲ್ಲೆಯ ಸಮಾಲ್ಖಾ ಪಟ್ಟಣದ ಸಮೀಪದಲ್ಲಿರುವ ಹತ್ವಾಲಾ ಗ್ರಾಮದಲ್ಲಿ ನಡೆದಿದೆ. ಪಟ್ಟಿಕಲ್ಯಾಣಾ ಗ್ರಾಮಕ್ಕೆ ಸೇರಿದ, 12ನೇ ತರಗತಿ ವ್ಯಾಸಂಗ ಮಾಡುತ್ತಿದ್ದ 17 ವರ್ಷದ ಕುಸ್ತಿಪಟು ತನಿಷ್ಕಾ ಮೃತಪಟ್ಟವರು.
ತನಿಷ್ಕಾ ಅಂತರರಾಷ್ಟ್ರೀಯ ಮಟ್ಟದ ಪಂದ್ಯಗಳಿಗೆ ತಯಾರಿ ನಡೆಸುತ್ತಿದ್ದರು. ಕೆಲವೇ ದಿನಗಳಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಪಂದ್ಯವೊಂದರಲ್ಲಿ ಭಾಗವಹಿಸಬೇಕಿತ್ತು. ಇದಕ್ಕಾಗಿ ಕಠಿಣ ತರಬೇತಿ ಪಡೆಯುತ್ತಿದ್ದರು. ವಾರದ ಆರು ದಿನ ಅಕಾಡಮಿಯಲ್ಲಿಯೇ ತಯಾರಿ ನಡೆಸುತ್ತಿದ್ದು ಪ್ರತಿ ಭಾನುವಾರ ಯಮುನಾ ನದಿ ಸಮೀಪದಲ್ಲಿರುವ ಹತ್ವಾಲಾ ಗ್ರಾಮಕ್ಕೆ ಬಂದು ಮತ್ತೊಬ್ಬ ರಾಷ್ಟ್ರಮಟ್ಟದ ಆಟಗಾರ್ತಿ ರೇಣು ಮತ್ತು ಇನ್ನೊಬ್ಬ ಆಟಗಾರ್ತಿಯೊಂದಿಗೆ ಅಭ್ಯಾಸ ಮಾಡುತ್ತಿದ್ದರು.