ಅಲಿಗಢ( ಉತ್ತರಪ್ರದೇಶ): ಹಸಿವಿನಿಂದ ಅನಾರೋಗ್ಯಕ್ಕೀಡಾದ ಮಹಿಳೆ ಹಾಗೂ ಆಕೆಯ ಐವರು ಮಕ್ಕಳನ್ನು ಉತ್ತರ ಪ್ರದೇಶದ ಅಲಿಗಢ ಮಲ್ಖಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ, ಈ ಕುಟುಂಬವು ಎರಡು ತಿಂಗಳಿನಿಂದ ತಿನ್ನಲು ಅನ್ನವಿಲ್ಲದೇ ಬಳಲುತ್ತಿದೆ.
ಮೂರು ಮಕ್ಕಳ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದು, ಅಗತ್ಯ ಚಿಕಿತ್ಸೆ ನೀಡಲಾಗ್ತಿದೆ. ಕೆಲವು ಎನ್‌ಜಿಒಗಳು ಈ ನಿರ್ಗತಿಕ ಕುಟುಂಬಕ್ಕೆ ಸಹಾಯ ನೀಡಲು ಮುಂದಾಗಿವೆ. ಸಹಾಯ ಮಾಡುವವರು ನನ್ನನ್ನು ಸಂಪರ್ಕಿಸಬಹುದು ಎಂದು ಮಲ್ಖಾನ್ ಸಿಂಗ್ ಜಿಲ್ಲಾ ಆಸ್ಪತ್ರೆಯ ತುರ್ತು ಮೇಲ್ವಿಚಾರಕ ಡಾ.ಅಮಿತ್ ಹೇಳಿದ್ದಾರೆ.
ಕೋವಿಡ್ ಲಾಕ್ಡೌನ್ ಮಧ್ಯೆಯೂ ಜನರಿಗೆ ಸರ್ಕಾರ ಪಡಿತರ ನೀಡುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಅದು ಎಲ್ಲಾ ಜನರನ್ನು ತಲುಪುತ್ತಿದೆಯೇ ಎಂಬುದನ್ನು ಈಗ ಮಕ್ಕಳೊಂದಿಗೆ ಆಸ್ಪತ್ರೆಗೆ ದಾಖಲಾಗಿರುವ 40 ವರ್ಷದ ಗುಡ್ಡೆ ಎಂಬ ಮಹಿಳೆಯನ್ನು ನೋಡಿದರೆ ತಿಳಿಯುತ್ತದೆ. ಈಕೆಯ 20 ವರ್ಷದ ಹಿರಿಯ ಮಗ ಸೇರಿ 5 ವರ್ಷದ ಕಿರಿಯ ಮಗನವರೆಗೂ ಎಲ್ಲರೂ ತಿನ್ನಲು ಅನ್ನವಿಲ್ಲದೇ ಆಹಾರಕ್ಕಾಗಿ 2 ತಿಂಗಳಿನಿಂದ ಪರಿತಪಿಸುತ್ತಿದ್ದಾರೆ.
2020ರಲ್ಲಿ ಗಂಡನ ನಿಧನದ ನಂತರ ಗುಡ್ಡಿ ಫ್ಯಾಕ್ಟರಿಯೊಂದಕ್ಕೆ ಹೋಗುತ್ತಿದ್ದರು, ತಿಂಗಳಿಗೆ 4000 ರೂ ಸಂಬಳ ಬರುತ್ತಿತ್ತು. ಹಿರಿಯ ಮಗ ಅಜಯ್ ಸಹ ಕೆಲಸಕ್ಕೆ ಹೋಗಲು ಆರಂಭಿಸಿದ್ದ. ಆದರೆ, ಲಾಕ್ಡೌನ್ ಹೇರಿದ ಪರಿಣಾಮ ಅಮ್ಮ ಮಗ ಇಬ್ಬರಿಗೂ ಉದ್ಯೋಗ ಇಲ್ಲದಂತಾಯ್ತು. ಅಕ್ಕ -ಪಕ್ಕದವರು ನೀಡಿದ ಫುಡ್ ಕಿಟ್ಗಳು 6 ಜನರಿರುವ ಈ ಕುಟುಂಬಕ್ಕೆ ಸಾಕಾಗುತ್ತಿರಲಿಲ್ಲ. ಎಷ್ಟೋ ದಿನ ನೀರು ಕುಡಿದು ಬದುಕಿದ್ದಾರಂತೆ. 2 ತಿಂಗಳಿಂದ ಸರಿಯಾಗಿ ಊಟ ಮಾಡದೇ ಇದೀಗ ಎಲ್ಲರೂ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ.