ನವದೆಹಲಿ:ಕಳೆದ ಕೆಲ ದಿನಗಳ ಹಿಂದೆ ಕೋವಿಡ್ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಮಹಿಳೆಯೊಬ್ಬಳು ಇದೀಗ ಸಾವನ್ನಪ್ಪಿದ್ದಾಳೆ. ಡೆಡ್ಲಿ ವೈರಸ್ಗೊಳಗಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ವೇಳೆ ಮುಖಕ್ಕೆ ಆಕ್ಸಿಜನ್ ಮಾಸ್ಕ್ ಹಾಕಿಕೊಂಡಿದ್ರೂ 'ಲವ್ ಯೂ ಜಿಂದಗಿ' ಹಿಂದಿ ಹಾಡು ಕೇಳಿ ಲವಲವಿಕೆಯಿಂದ ಇರುತ್ತಿದ್ದ ಯುವತಿ ತನ್ನ ಪ್ರಾಣ ಕಳೆದುಕೊಂಡಿದ್ದಾಳೆ.
30 ವರ್ಷದ ಮಹಿಳೆಗೆ ಕೋವಿಡ್ ಸೋಂಕು ತಗುಲಿದ್ದ ಕಾರಣ ಏಪ್ರಿಲ್ 28ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ,ಅವರಿಗೆ ಐಸಿಯು ಬೆಡ್ ಸಿಕ್ಕಿರಲಿಲ್ಲ. ಆದರೂ ಆಮ್ಲಜನಕ ನೀಡಿದ್ದ ಕಾರಣ ಎನ್ಐವಿ ಯಂತ್ರದ ಮೂಲಕ ಉಸಿರಾಟ ನಡೆಸಿದ್ದರು. ಈ ವೇಳೆ, ಎಲ್ಲ ರೀತಿಯ ಚಿಕಿತ್ಸೆ ನೀಡಲಾಗಿತ್ತು. ಆಕೆ ಜೀವನದ ಉತ್ಸಾಹ ಹೆಚ್ಚಿಸಿಕೊಳ್ಳಲು ಸಂಗೀತ ಕೇಳುತ್ತೇನೆ ಎಂದು ಹೇಳಿದ್ದಾಗಿ ಡಾ. ಮೋನಿಕಾ ಲಂಗೇ ಟ್ವೀಟ್ ಮಾಡಿದ್ದರು.
ಇದಾದ 10 ದಿನಗಳ ಬಳಿಕ ಅವರಿಗೆ ಐಸಿಯು ಬೆಡ್ ಸಿಕ್ಕಿತ್ತು. ತುಂಬಾ ಧೈರ್ಯಶಾಲಿ ಹುಡುಗಿ ಈಕೆ ಎಂದು ವೈದ್ಯರು ಟ್ವಿಟರ್ ಮೂಲಕ ಹೇಳಿಕೊಂಡಿದ್ದರು. ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೇಳೆ ಶಾರುಖ್ ಖಾನ್ ಹಾಗೂ ಆಲಿಯಾ ಭಟ್ ನಟನೆ ಮಾಡಿದ್ದ 'ಡಿಯರ್ ಜಿಂದಗಿ' ಚಿತ್ರದ 'ಲವ್ ಯೂ ಜಿಂದಗಿ' ಹಾಡು ಕೇಳುತ್ತಾ ಕುಳಿತುಕೊಂಡಿದ್ದ ವಿಡಿಯೋ ತುಣಕವೊಂದನ್ನ ಡಾ. ಮೋನಿಕಾ ಮೇ 18ರಂದು ಪೋಸ್ಟ್ ಮಾಡಿದ್ದರು. ಆದರೆ ದಿನಕಳೆದಂತೆ ಆಕೆಯ ಆರೋಗ್ಯ ಕ್ಷೀಣಿಸಲು ಶುರುವಾಗಿದ್ದರಿಂದ ದಯವಿಟ್ಟು ಎಲ್ಲರೂ ಆಕೆಗೋಸ್ಕರ ಪ್ರಾರ್ಥನೆ ಮಾಡಿ ಎಂದು ಡಾ. ಮತ್ತೊಂದು ಟ್ವೀಟ್ ಮಾಡಿದ್ದರು.
ಆದರೆ, ನಿನ್ನೆ ಆಕೆ ವಿಧಿ ಆಟದ ಮುಂದೆ ಸೋತು ತನ್ನ ಪ್ರಾಣ ಕಳೆದುಕೊಂಡಿದ್ದಾಳೆ. ಇದರ ಬಗ್ಗೆ ಮಾಹಿತಿ ನೀಡಿರುವ ಡಾ. ಮೋನಿಕಾ ಹತಾಶೆಯ ಮಾತುಗಳನ್ನಾಡಿದ್ದಾರೆ. ಇದೇ ವೇಳೆ ಆಕೆ ಮಾಧ್ಯಮಗಳ ವಿರುದ್ಧ ತಮ್ಮ ಆಕ್ರೋಶ ಸಹ ವ್ಯಕ್ತಪಡಿಸಿದ್ದು, ದಯವಿಟ್ಟು ಕಠಿಣ ಹೃದಯಿಗಳಾಗಬೇಡಿ. ಆಕೆಯ ಕುಟುಂಬದ ಸದಸ್ಯರು ದುಃಖದಲ್ಲಿದ್ದಾರೆ ಎಂದಿದ್ದಾರೆ.