ಮುಂಬೈ(ಮಹಾರಾಷ್ಟ್ರ): ಮುಂಬೈನ ಬಾಂದ್ರಾದ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ಶನಿವಾರ ವಿವಾಹಿತ ಮಹಿಳೆಯೊಬ್ಬರು ಭಾರಿ ಅಲೆಯ ಹೊಡೆತಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಜ್ಯೋತಿ ಸೋನಾರ್ ಮೃತ ಮಹಿಳೆ. ನೋಡ ನೋಡುತ್ತಿದ್ದಂತೆ ಪತ್ನಿಯನ್ನು ಕಳೆದುಕೊಂಡ ಅಸಹಾಯಕ ಪತಿ ಮತ್ತು ಮಕ್ಕಳು ಕಿರುಚಾಟ ಮನಕಲಕುವಂತಿದೆ. ಈ ಹೃದಯ ವಿದ್ರಾವಕ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಘಟನೆಯ ಸಂಪೂರ್ಣ ವಿವರ: ಬಾಂದ್ರಾದ ಮುಂಬೈನ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ದಂಪತಿ ಬಂಡೆಯ ಮೇಲೆ ಕುಳಿತಿದ್ದರು. ಅವರ ಮಕ್ಕಳು ಆ ಸಂತೋಷದಾಯಕ ಕ್ಷಣವನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿದ್ದರು. ಈ ವೇಳೆ ದುರದೃಷ್ಟಕರ ಘಟನೆಯೊಂದು ನಡೆದು ಹೋಯಿತು. ಭೀಕರ ಅಲೆ ಅಪ್ಪಳಿಸಿದಾಗ ಕಣ್ಣು ಮಿಟುಕಿಸುವುದರಲ್ಲಿ ಎಲ್ಲವೂ ಬದಲಾಯಿತು. ಬೃಹತ್ ಅಲೆಗೆ ಸಿಲುಕಿ ಮಹಿಳೆ ಕೊಚ್ಚಿಕೊಂಡು ಹೋದರು. ಆಗ ಮಕ್ಕಳು ಅಸಹಾಯಕತೆಯಿಂದ 'ಮಮ್ಮಿ' ಎಂದು ಕಿರುಚುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಕುಟುಂಬವು ಜುಹು ಚೌಪಾಟಿಗೆ ಭೇಟಿ ನೀಡಲು ಯೋಜಿಸಿತ್ತು. ಆದರೆ ಹೆಚ್ಚಿನ ಉಬ್ಬರವಿಳಿತದ ಕಾರಣ ಬೀಚ್‌ಗೆ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಆದ್ದರಿಂದ ಅವರು ತಮ್ಮ ಯೋಜನೆಯನ್ನು ಬದಲಾಯಿಸಿ ಬಾಂದ್ರಾ ಕಡೆಗೆ ಹೋಗಲು ನಿರ್ಧರಿಸಿದರು. ಬಾಂದ್ರಾ ಕೋಟೆಯನ್ನು ತಲುಪಿದ ನಂತರ ಕುಟುಂಬ ಸದಸ್ಯರು ಉತ್ಸಾಹದಿಂದ ಫೋಟೋ ತೆಗೆಯಲು ಸಮುದ್ರದ ಹತ್ತಿರ ಹೋಗಿದ್ದರು. ದಂಪತಿ ಬಂಡೆಯ ಮೇಲೆ ಕುಳಿತುಕೊಂಡಿದ್ದಾಗ ಅವರ ಮಕ್ಕಳು ದೂರದಿಂದ ಫೋಟೋಗಳನ್ನು ತೆಗೆಯುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಯಮ ಸ್ವರೂಪಿಯಾಗಿ ದೊಡ್ಡ ಅಲೆಯೊಂದು ಹಿಂಬದಿಯಿಂದ ಅಪ್ಪಳಿಸಿದೆ. ಅಲೆಯ ರಭಸಕ್ಕೆ ಜ್ಯೋತಿ ಸೋನಾರ್ ಕೊಚ್ಚಿ ಹೋಗಿದ್ದು, ಕೆಲವೇ ಸೆಕೆಂಡುಗಳಲ್ಲಿ ಸಾವನ್ನಪ್ಪಿದ್ದಾರೆ.