ಎರ್ನಾಕುಲಂ, ಕೇರಳ:ಜಿಲ್ಲೆಯಲ್ಲಿ ಬರ್ಬರ ಕೊಲೆಯೊಂದು ನಡೆದಿದೆ. ಯುವಕನೊಬ್ಬ ತನ್ನ ಸ್ನೇಹಿತೆಯನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಈ ಘಟನೆ ಆಗಸ್ಟ್ 9ರ ರಾತ್ರಿ ಕೊಚ್ಚಿ ನಗರದಲ್ಲಿ ನಡೆದಿದೆ. ಕೊಲೆಯಾದ ಯುವತಿಯನ್ನು ಕೊಟ್ಟಾಯಂ ಚಂಗನಾಶ್ಶೇರಿ ಮೂಲದ ರೇಷ್ಮಾ ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಯುವಕನನ್ನು ಬಾಳುಸ್ಸೆರಿ ನಿವಾಸಿ ನೌಶಿದ್ ಎಂದು ತಿಳಿದು ಬಂದಿದೆ.
ಆರೋಪಿ ನೌಶಿದ್ ಕಾಲೂರು ನಗರದ ಹೊಟೇಲ್ವೊಂದರಲ್ಲಿ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದು, ಲ್ಯಾಬ್ ಅಟೆಂಡರ್ ರೇಷ್ಮಾ ಜೊತೆ ಸ್ನೇಹ ಬೆಳಸಿದ್ದ. ಇವರಿಬ್ಬರ ಪರಿಚಯ ಸಾಮಾಜಿಕ ಜಾಲತಾಣ ಮೂಲಕ ಆಗಿತ್ತು. ಆಗಸ್ಟ್ 9 ರಾತ್ರಿ ರೇಷ್ಮಾಳಿಗೆ ನೌಶಿದ್ ಕಾಲ್ ಮಾಡಿ ಕಾಲೂರಿನ ಹೊಟೇಲ್ ಬರುವಂತೆ ಹೇಳಿದ್ದಾನೆ. ನೌಶಿದ್ ಫೋನ್ ಬಂದಾಕ್ಷಣ ರೇಷ್ಮಾ ನೇರ ಹೊಟೇಲ್ಗೆ ತೆರಳಿದ್ದಾಳೆ. ಬಳಿಕ ನೌಶಿದ್ ರೂಂಗೆ ಹೋಗಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಕೋಪದಲ್ಲಿ ನೌಶಿದ್ ಚಾಕು ತೆಗೆದುಕೊಂಡು ರೇಷ್ಮಾ ಅವರ ಕುತ್ತಿಗೆಗೆ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದದ್ದ ರೇಷ್ಮಾಳನ್ನು ಕಂಡ ಹೊಟೇಲ್ ಸಿಬ್ಬಂದಿ ಕೂಡಲೇ ಆಕೆಯ ಸಹಾಯಕ್ಕೆ ದೌಡಾಯಿಸಿದ್ದರು. ಆಕೆಯ ಪ್ರಾಣ ಉಳಿಸಲು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ರೇಷ್ಮಾ ಮೃತಪಟ್ಟರು. ರೇಷ್ಮಾಳನ್ನು ಆಸ್ಪತ್ರೆಗೆ ದಾಖಲಿಸುವ ಸಮಯದಲ್ಲಿ ನೌಶಿದ್ ಸಹ ಜೊತೆಗಿದ್ದನು. ಆಗ ಪೊಲೀಸರಿಗೆ ಅನುಮಾನ ಬಂದು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನೌಶಿದ್ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.