ಕೈತಾಲ್ (ಹರಿಯಾಣ):ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಜನನಾಯಕ್ ಜನತಾ ಪಕ್ಷದ ಶಾಸಕ ಈಶ್ವರ್ ಸಿಂಗ್ ಅವರಿಗೆ ಸಂತ್ರಸ್ತ ಮಹಿಳೆಯೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ. ಕೈತಾಲ್ ಜಿಲ್ಲೆಯ ಗುಹ್ಲಾ ಗ್ರಾಮದಲ್ಲಿ ಬುಧವಾರ ಘಟನೆ ನಡೆದಿದ್ದು, ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ? : ನೆರೆದಿದ್ದ ಜನಸಮೂಹದ ಸಮ್ಮುಖದಲ್ಲೇ ಶಾಸಕರೊಬ್ಬರಿಗೆ ಕಪಾಳಮೋಕ್ಷ ಮಾಡಿದ ಬಳಿಕ ಮಹಿಳೆ ‘ಈಗ ಯಾಕೆ ಬಂದಿದ್ದೀರಿ’ ಎಂದು ಪ್ರಶ್ನಿಸಿದ್ದಾರೆ. ಘಟನೆ ನಡೆದಾಗ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದರು. ಬಳಿಕ, ಶಾಸಕರ ಅಕ್ಕಪಕ್ಕದಲ್ಲಿದ್ದ ಇತರರು ತಕ್ಷಣವೇ ಮಹಿಳೆಯನ್ನು ತಡೆಯಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಮಹಿಳೆ ಮಾತ್ರವಲ್ಲದೆ, ಪ್ರವಾಹ ಪೀಡಿತ ಗ್ರಾಮಸ್ಥರು ಸಹ ಶಾಸಕರ ವಿರುದ್ಧ ಕಿಡಿಕಾರಿದ್ದಾರೆ.
ಘಟನೆ ಬಗ್ಗೆ ಎಂಎಲ್ಎ ಹೇಳಿದ್ದೇನು?: ಮಹಿಳೆ ಕಪಾಳಮೋಕ್ಷ ಮಾಡಿದ ಕೆಲವೇ ಗಂಟೆಗಳ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕರು, "ನಾನು ಮಹಿಳೆಯ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ, ನಾನು ಅವರನ್ನು ಕ್ಷಮಿಸಿದ್ದೇನೆ" ಎಂದರು.
ಈಶ್ವರ್ ಸಿಂಗ್ ಅವರು ಗುಹ್ಲಾ ಚೀಕಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದು, ಜನನಾಯಕ್ ಜನತಾ ಪಕ್ಷದದಿಂದ ಚುನಾವಣೆಗೆ ಸ್ಪರ್ಧಿಸಿ ಜಯ ಗಳಿಸಿದ್ದರು. ಸದ್ಯಕ್ಕೆ ಹರಿಯಾಣದ ಕುರುಕ್ಷೇತ್ರ ನಗರದಲ್ಲಿ ವಾಸಿಸುತ್ತಿದ್ದಾರೆ. ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಜನನಾಯಕ್ ಜನತಾ ಪಕ್ಷದ ಸಮ್ಮಿಶ್ರ ಸರ್ಕಾರವಿದೆ. ಈಶ್ವರ್ ಸಿಂಗ್ ಅವರು 2008 ಮತ್ತು 2014 ರ ನಡುವೆ ಹರಿಯಾಣದ ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.