ದರ್ಭಾಂಗಾ (ಬಿಹಾರ): ಎರಡೂವರೆ ವರ್ಷದ ಮಗುವನ್ನು ವಾಮಾಚಾರಕ್ಕೆ ಬಲಿ ಕೊಟ್ಟ ಆರೋಪದ ಮೇಲೆ ಜನರು ಮಹಿಳೆಯೊಬ್ಬರನ್ನು ಥಳಿಸಿರುವ ಘಟನೆ ಬಿಹಾರದ ದರ್ಭಾಂಗ್ನ ಸಕತ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಮಹಿಳೆಯ ಮನೆಯಲ್ಲಿ ಮಗುವಿನ ಶವ ಪತ್ತೆಯಾಗಿದ್ದು, ಗ್ರಾಮಸ್ಥರು ಆರೋಪಿ ಮಹಿಳೆಯನ್ನು ಮನೆಯಿಂದ ಎಳೆದೊಯ್ದು ಮನಬಂದಂತೆ, ಕಂಬಕ್ಕೆ ಕಟ್ಟಿ, ವಿವಸ್ತ್ರಗೊಳಿಸಿ, ಥಳಿಸಿದ್ದಾರೆ.
ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ, ವಿಷಯ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ನಾಪತ್ತೆಯಾಗಿದ್ದ ಎರಡೂವರೆ ವರ್ಷದ ಮಗುವಿನ ಶವ ಬಳಿಕ ಸಕತ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶೇರ್ಪುರ್ ನಾರಾಯಣಪುರದ ದರ್ಗಾ ತೋಲಾದಲ್ಲಿ ಪತ್ತೆಯಾಗಿತ್ತು. ನೆರೆಹೊರೆಯ ಮಹಿಳೆಯೊಬ್ಬರು ಮಾಟ ಮಂತ್ರಮಾಡಿ ಮಗುವನ್ನು ಕೊಂದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಹಿರಿಯ ಪೊಲೀಸ್ ಅಧೀಕ್ಷಕ ಅವಕಾಶ್ ಕುಮಾರ್ ಮಾತನಾಡಿ, ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಗಾಯಗೊಂಡಿರುವ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಎಫ್ಎಸ್ಎಲ್ ತಂಡವನ್ನು ಕರೆಸಿದ್ದು, ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣ ಸಂಬಂಧ ಎರಡು ಎಫ್‌ಐಆರ್ ದಾಖಲಿಸಲಾಗಿದೆ. ಮಗುವಿನ ಹತ್ಯೆ ಹಾಗೂ ಗುಂಪು ಮಹಿಳೆಯನ್ನು ಥಳಿಸಿರುವ ಬಗ್ಗೆ ಪ್ರತ್ಯೇಕ ಕೇಸ್ ದಾಖಲಾಗಿದೆ. ಕಾನೂನನ್ನು ಕೈಗೆ ತೆಗೆದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ತನಿಖೆಯ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಕತ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಶೇರ್ಪುರ್ ನಾರಾಯಣಪುರದ ದರ್ಗಾ ಟೋಲಾದ ಗುಲ್ಬಿಯಾ ದೇವಿ ಮತ್ತು ಶ್ಯಾಮ್ ಚೌಪಾಲ್ ದಂಪತಿಯ ಎರಡೂವರೆ ವರ್ಷದ ಮಗ ಆಯುಷ್ ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಾಪತ್ತೆಯಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ. ನಿರ್ಮಾಣ ಹಂತದಲ್ಲಿದ್ದ ಮನೆಯಲ್ಲಿ ಮಗುವಿನ ಶವ ಬಿದ್ದಿತ್ತು. ಬಳಿಕ ಸ್ಥಳಕ್ಕಾಗಮಿಸಿದ ಜನರು ಮಗುವಿನ ಶವ ಬಿದ್ದಿರುವುದನ್ನು ನೋಡಿ ಆರೋಪಿ ಮಹಿಳೆಗೆ ಥಳಿಸಿದ್ದಾರೆ.
ಇದನ್ನೂ ಓದಿ:ನಿಧಿಗಾಗಿ ರೈತನ ನರಬಲಿ: ಆರೋಪಿ ಬಾಯ್ಬಿಟ್ಟ ಭಯಾನಕ ಸ್ಟೋರಿ!