ಭುವನೇಶ್ವರ (ಒಡಿಶಾ):ಕಾರ್ಯಸಿದ್ಧಿಗಾಗಿ 14 ವರ್ಷದ ಬಾಲಕನನ್ನು ಬಲಿ ಕೊಟ್ಟ ಶಂಕೆಯ ಮೇಲೆ ಮಹಿಳಾ ಅರ್ಚಕಿ ಮತ್ತು ಆಕೆಯ ಮೂವರು ಮಕ್ಕಳನ್ನು ಬಂಧಿಸಿದ ಘಟನೆ ಒಡಿಶಾದಲ್ಲಿ ನಡೆದಿದೆ. ಘಟನೆ ಜುಲೈ 22 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಗಳು ತಮ್ಮ ಕೈಡವಾಡವನ್ನು ಭಾಗಶಃ ಒಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಹಿನ್ನೆಲೆ:ಅಂಗುಲ್ ಜಿಲ್ಲೆಯ ಸುವರ್ಣಪುರ ಗ್ರಾಮದಲ್ಲಿ ಜುಲೈ 22 ರಂದು ಈ ಬಲಿ ನಡೆದಿದೆ. ಬಾಲಕ ಅನಾರೋಗ್ಯದಿಂದ ಬಳಲುತ್ತಿದ್ದ. ಈ ವೇಳೆ ತಾಯಿ ಮಹಿಳಾ ಅರ್ಚಕಿಯ ಬಳಿಗೆ ಆತನನ್ನು ಕರೆದೊಯ್ದಿದ್ದಾರೆ. ಆಗ ಬಾಲಕ ಮತ್ತು ಆತನ ತಾಯಿಯನ್ನು ಪ್ರತ್ಯೇಕ ಕೋಣೆಗಳಲ್ಲಿ ರಾತ್ರಿ ಮಲಗಿಸಲಾಗಿತ್ತು. ಮರುದಿನ ಬೆಳಗ್ಗೆ ಬಾಲಕ ಕಾಣೆಯಾಗಿದ್ದ.
ಆತಂಕಗೊಂಡ ಕುಟುಂಬಸ್ಥರು ಮಗನಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಸಿಗದ ಕಾರಣ ತಾಯಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದಾರೆ. ಜುಲೈ 24ರಂದು ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇದೇ ವೇಳೆ ಜುಲೈ 28ರಂದು ಗ್ರಾಮದ ಬರುನಿ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿನ ಮೃತದೇಹ ಪತ್ತೆಯಾಗಿತ್ತು.
ಬಾಲಕನ ಶವ ಸಿಕ್ಕಿದ್ದು ಭಾರೀ ಅನುಮಾನಕ್ಕೆ ಕಾರಣವಾಗಿತ್ತು. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಘಟನೆ ಖಂಡಿಸಿ ಜನರು ತೀವ್ರ ಪ್ರತಿಭಟನೆ ನಡೆಸಿ ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ್ದರು. ಕಿಯಾಕಟಾ-ಅಥಮಲ್ಲಿಕ್ ರಸ್ತೆಯನ್ನೂ ತಡೆ ಹಿಡಿಯಲಾಗಿತ್ತು. ಹಂತಕರನ್ನು ಪತ್ತೆ ಮಾಡುವುದಾಗಿ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿದ್ದರು. ಭರವಸೆ ನೀಡಿದ ನಂತರ ಧರಣಿ ಹಿಂತೆಗೆದುಕೊಳ್ಳಲಾಗಿತ್ತು.
ಮಹಿಳಾ ಅರ್ಚಕಿ, ಮಕ್ಕಳ ಸೆರೆ:ಇನ್ನು, ಬಾಲಕ ನಾಪತ್ತೆಗೂ ಮೊದಲು ಮಹಿಳಾ ಅರ್ಚಕಿಯ ಬಳಿಗೆ ಹೋಗಿದ್ದರ ಮಾಹಿತಿ ಪಡೆದ ಪೊಲೀಸರು ಶಂಕೆಯ ಮೇಲೆ ಅರ್ಚಕಿ ಮತ್ತು ಅಕೆಯ ಮೂವರು ಮಕ್ಕಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಈ ವೇಳೆ ಅವರು ಅಪರಾಧವನ್ನು ಭಾಗಶಃ ಒಪ್ಪಿಕೊಂಡಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕೇಸ್ನಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಪರೀಕ್ಷಾ ವರದಿ ಬಳಿಕ ಸತ್ಯ ತಿಳಿದು ಬರಲಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಕೊಲೆ ಪ್ರಕರಣದ ಹೆಚ್ಚಿನ ತನಿಖೆಗಾಗಿ ಪೊಲೀಸರು ಆರೋಪಿಗಳನ್ನು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ನರಬಲಿ ನೀಡಿದ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ. ಸದ್ಯಕ್ಕೆ ಯಾವುದೇ ಪುರಾವೆಗಳಿಲ್ಲದ ಕಾರಣ ಒಪ್ಪಿಕೊಳ್ಳಲು ಅಥವಾ ನಿರಾಕರಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ:ವೈದ್ಯೆ ಆಗಲು ಕನಸು ಕಂಡಿದ್ದ ಬಾಲಕಿ 17ನೇ ವಯಸ್ಸಿಗೆ ಗರ್ಭಿಣಿ.. ಅಪ್ರಾಪ್ತೆಯ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ ಬಾಂಬೆ ಹೈಕೋರ್ಟ್