ಕೃಷ್ಣಗಿರಿ(ತಮಿಳುನಾಡು):ಅಕ್ರಮ ಸಂಬಂಧ ವಿರೋಧಿಸಿದ್ದಕ್ಕೆ ಪತಿ, ಮಾಜಿ ಪೊಲೀಸ್ ಅಧಿಕಾರಿಯನ್ನು ಸುಪಾರಿ ನೀಡಿ ಕೊಲೆ ಮಾಡಿಸಿದ ಪ್ರಕರಣದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿದೆ. ವಿಶೇಷ ಸಬ್ಇನ್ಸ್ಪೆಕ್ಟರ್ ಚಿತ್ರಾ(38)ಬಂಧಿತ ಮಹಿಳಾ ಅಧಿಕಾರಿ. ತಮಿಳುನಾಡಿನ ಸಿಂಗಾರಪೆಟ್ಟೈ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮಾಜಿ ಪೊಲೀಸ್ ಅಧಿಕಾರಿ ಸೆಂಥಿಲ್‌ಕುಮಾರ್ (48) ಕೊಲೆಯಾದವರು.
ಪೊಲೀಸ್ ಅಧಿಕಾರಿಯಾಗಿದ್ದ ಸೆಂಥಿಲ್‌ಕುಮಾರ್ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದ್ದಕ್ಕೆ 2012 ರಲ್ಲಿ ಕೆಲಸದಿಂದ ವಜಾ ಆಗಿದ್ದರು. ಬಳಿಕ ಪೊಲೀಸ್ ಅಧಿಕಾರಿ ದಂಪತಿ ಮಧ್ಯೆ ಬಿರುಕು ಉಂಟಾಗಿ ಸೆಂಥಿಲ್‌ಕುಮಾರ್ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಸೆಪ್ಟೆಂಬರ್ನಲ್ಲಿ ಕಾರ್ಯಕ್ರಮಕ್ಕೆ ಎಂದು ಹೋದ ಸೆಂಥಿಲ್‌ಕುಮಾರ್ ನಾಪತ್ತೆಯಾಗಿದ್ದರು. ಹುಡುಕಾಟದ ಬಳಿಕ ಅವರ ತಾಯಿ ಪೊಲೀಸ್ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.
ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ:ಮಾಜಿ ಪೊಲೀಸ್ ಅಧಿಕಾರಿ ನಾಪತ್ತೆ ಪ್ರಕರಣದ ಬೆನ್ನು ಬಿದ್ದ ಪೊಲೀಸರಿಗೆ ಸುಳಿವೇ ಸಿಕ್ಕಿರಲಿಲ್ಲ. ಬಳಿಕ ವಿಶೇಷ ತಂಡ ರಚಿಸಿ ತನಿಖೆ ನಡೆಸಲಾಯಿತು. ಮೊಬೈಲ್ ನೆಟ್ವರ್ಕ್ ಆಧಾರದ ಮೇಲೆ ತನಿಖೆ ನಡೆಸಿದಾಗ ವಿಶೇಷ ಪಿಎಸ್ಐ ಆಗಿರುವ ಪತ್ನಿ ಚಿತ್ರಾ ಅವರ ನೂತನ ಗೃಹದಲ್ಲಿ ಸೆಂಥಿಲ್‌ಕುಮಾರ್ ಮೊಬೈಲ್ ಸ್ವಿಚ್ಡ್ ಆಫ್ ಆಗಿರುವುದು ಗೊತ್ತಾಗಿದೆ. ಇದರ ಜಾಡು ಹಿಡಿದಾಗ ಕೊಲೆಯ ರಹಸ್ಯ ಬಯಲಾಗಿದೆ.
ಮಹಿಳಾ ಅಧಿಕಾರಿ ಚಿತ್ರಾ ಅವರು ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದರು. ಇದನ್ನರಿತ ಪತಿ ಸೆಂಥಿಲ್‌ಕುಮಾರ್ ವಿರೋಧಿಸಿದ್ದರು. ಅಲ್ಲದೇ, ಇದಕ್ಕಾಗಿ ಹಲವಾರು ಬಾರಿ ಇಬ್ಬರೂ ಕಿತ್ತಾಡಿಕೊಂಡಿದ್ದರು. ಇದರಿಂದ ಬೇಸತ್ತ ಸೆಂಥಿಲ್‌ಕುಮಾರ್ ಚಿತ್ರಾರಿಂದ ಬೇರೆಯಾಗಿದ್ದರು. ಅಕ್ರಮ ಸಂಬಂಧ ಬಯಲಾಗುವ ಭಯದಲ್ಲಿ ಚಿತ್ರಾ ಗಂಡನನ್ನೇ ಕೊಲೆ ಮಾಡಲು ಪುತ್ರ ಜಗದೀಶಕುಮಾರ್ ಮತ್ತು ಪ್ರಿಯಕರ ಅಮಲ್ರಾಜ್ ಜೊತೆ ಸೇರಿ ಸ್ಕೆಚ್ ಹಾಕಿದ್ದರು.