ಜೈಪುರ (ರಾಜಸ್ಥಾನ) : ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಅಮಾನುಷವಾಗಿ ಮೆರವಣಿಗೆ ಮಾಡಿದ ಘಟನೆ ಮಾಸುವ ಮುನ್ನವೇ ರಾಜಸ್ಥಾನದಲ್ಲಿ ಸಹ ಅಂತಹದೇ ಘಟನೆ ಜರುಗಿದೆ. ಇಲ್ಲಿನ ಪ್ರತಾಪ್‌ಗಢ ಜಿಲ್ಲೆಯ ಧರಿಯಾವಾಡ ಪೊಲೀಸ್ ಠಾಣಾ ವ್ಯಾಪ್ತಿಯ ಪಹಡ ಗ್ರಾಮ ಪಂಚಾಯತ್‌ನ ನಿಚಲ್‌ಕೋಟಾ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಲಾಗಿದೆ. ಈ ಕುರಿತಾದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಮೂವರು ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ಸೆರೆ ಹಿಡಿಯಲು ಮುಂದಾದಾಗ ಅವರು ಓಡಿ ಹೋಗಲು ಯತ್ನಿಸಿದ್ದು, ಈ ವೇಳೆ ಗಾಯಗೊಂಡಿದ್ದಾರೆ. ಸದ್ಯಕ್ಕೆ ಮೂವರಿಗೆ ಚಿಕಿತ್ಸೆ ಆಸ್ಪತ್ರೆಯಲ್ಲಿ ನೀಡಲಾಗುತ್ತಿದೆ. ಎಫ್‌ಐಆರ್‌ನಲ್ಲಿ ಒಟ್ಟು 10 ಮಂದಿ ಹೆಸರಿದ್ದು, ಉಳಿದವರ ಬಂಧನಕ್ಕೆ ಪ್ರಯತ್ನಿಸುತ್ತಿದ್ದೇವೆ ಎಂದು ಬನ್ಸ್ವಾರ ಐಜಿ ಎಸ್ ಪರಿಮಳಾ ತಿಳಿಸಿದ್ದಾರೆ. ಹಾಗೆಯೇ, ಸಂತ್ರಸ್ತೆ ಹಾಗೂ ಆರೋಪಿಗಳು ಬುಡಕಟ್ಟು ಸಮುದಾಯಕ್ಕೆ ಸೇರಿದವರು ಎಂದು ತಿಳಿದು ಬಂದಿದೆ. ಆರೋಪಿಗಳನ್ನು ಸಂತ್ರಸ್ತೆಯ ಮಾವ ಮತ್ತು ಅವರ ಕುಟುಂಬಕ್ಕೆ ಸೇರಿದ ಸದಸ್ಯರು ಎಂದು ಗುರುತಿಸಲಾಗಿದೆ.
ಘಟನೆ ಬಗ್ಗೆ ಮಾಹಿತಿ ಪಡೆದ ಎಸ್‌ಪಿ ಅಮಿತ್ ಕುಮಾರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಉಮೇಶ್ ಮಿಶ್ರಾ, ಅಪರಾಧ ಎಡಿಜಿ ದಿನೇಶ್ ಎಂ.ಎನ್ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಮಾಹಿತಿ ಕಲೆ ಹಾಕಿದ್ದಾರೆ.
"ಕೇಸ್ಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದ್ದು, ಘಟನೆಯಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಗುರುತಿಸಲಾಗಿದೆ. ಕೂಡಲೇ ಆರೋಪಿಗಳ ಬಂಧನಕ್ಕೆ ಆರು ತಂಡಗಳನ್ನು ರಚಿಸಲಾಗಿದೆ" ಎಂದು ಎಸ್‌ಪಿ ಅಮಿತ್ ಕುಮಾರ್ ತಿಳಿಸಿದ್ದಾರೆ.
ಡಿಜಿಪಿ ಉಮೇಶ್ ಮಿಶ್ರಾ ಟ್ವೀಟ್ : "ಪ್ರತಾಪ್‌ಗಢ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದಲ್ಲಿ ಭಾಗಿಯಾದ ಎಲ್ಲ ಆರೋಪಿಗಳನ್ನು ಗುರುತಿಸಲಾಗಿದೆ, ಶೀಘ್ರದಲ್ಲೇ ಆರೋಪಿಗಳನ್ನು ಸೆರೆ ಹಿಡಿಯಲಾಗುವುದು" ಎಂದು ರಾಜಸ್ಥಾನ ಪೊಲೀಸ್ ಡಿಜಿಪಿ ಉಮೇಶ್ ಮಿಶ್ರಾ ಹೇಳಿದ್ದಾರೆ.
ಮಾಜಿ ಸಿಎಂ ವಸುಂಧರಾ ರಾಜೇ ಟ್ವೀಟ್ : ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೆ, ಈ ವಿಡಿಯೋವನ್ನು ಯಾರು ಶೇರ್ ಅಥವಾ ಪೋಸ್ಟ್ ಮಾಡಬೇಡಿ ಎಂದು ಜನರಿಗೆ ಸಾಮಾಜಿಕ ಮಾಧ್ಯಮ ಎಕ್ಸ್ ಆ್ಯಪ್ನಲ್ಲಿ ಮನವಿ ಮಾಡಿದ್ದಾರೆ. ಸ್ಥಳೀಯ ಶಾಸಕ ನಾಗರಾಜ ಮೀನಾ ಮಾತನಾಡಿ, "ಘಟನೆಯ ಬಗ್ಗೆ ರಾತ್ರಿ 9:00 ಗಂಟೆ ಸುಮಾರಿಗೆ ನನಗೆ ಮಾಹಿತಿ ಸಿಕ್ಕಿತು, ನಂತರ ನಾನು ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಅವರೊಂದಿಗೆ ಮಾತನಾಡಿದ್ದೇನೆ. ಇಂತಹ ಘಟನೆಗಳು ಎಂದಿಗೂ ನಡೆಯಬಾರದು. ಪೊಲೀಸರು ತ್ವರಿತ ಕ್ರಮ ಕೈಗೊಳ್ಳುತ್ತಿದ್ದಾರೆ" ಎಂದಿದ್ದಾರೆ.
ಪ್ರತಿಪಕ್ಷದ ಉಪನಾಯಕ ಸತೀಶ್ ಪೂನಿಯಾ ಕೂಡ ಪ್ರತಾಪಗಢ ಘಟನೆ ಕುರಿತು ಎಕ್ಸ್ ಆ್ಯಪ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಪ್ರಶ್ನಿಸಿದ್ದಾರೆ. ಪ್ರತಾಪ್‌ಗಢದಲ್ಲಿ ಬುಡಕಟ್ಟು ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ವಿಡಿಯೋವನ್ನು ನೋಡಿದ ನಂತರ ನನ್ನ ಆತ್ಮವು ಕಂಪಿಸುತ್ತಿದೆ. ಆರೋಪಿಗಳು ಅಪರಾಧದ ವಿಡಿಯೋಗಳನ್ನು ಬಹಿರಂಗವಾಗಿ ಮಾಡುತ್ತಿದ್ದಾರೆ. ಕೂಡಲೇ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ಇಂತಹ ಕೃತ್ಯ ಎಸಗಲು ಯೋಚಿಸುವವರ ಮನಸ್ಸಿನಲ್ಲಿ ಭಯ ಉಂಟುಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ :Manipur violence: ಮಹಿಳೆಯರ ಬೆತ್ತಲೆ ಮೆರವಣಿಗೆಗೂ ಮುನ್ನ ಜನರನ್ನು ಕೊಂದು ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು: ಎಫ್‌ಐಆರ್‌ನಲ್ಲಿ ಉಲ್ಲೇಖ