ಲಖನೌ: ಮಹಿಳೆ ವಿವಾಹೇತರ ಸಂಬಂಧ ಹೊಂದಿದ್ದರೆ, ಆಕೆ ಪತಿಯಿಂದ ಜೀವನಾಂಶ ಪಡೆಯಲು ಅರ್ಹತೆ ಹೊಂದಿಲ್ಲ ಎಂದು ಹೇಳಿದೆ. ಪತಿಯಿಂದ ಜೀವನಾಂಶ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಲಖನೌದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ. ನ್ಯಾಯಾಧೀಶ ವಿವೇಕಾನಂದ್ ಶರಣ್ ತ್ರಿಪಾಠಿ ಬುಧವಾರ ತೀರ್ಪು ನೀಡಿದ್ದಾರೆ.
ಮಹಿಳೆ ಪತಿ ಸಲ್ಲಿಸಿದ ಮೇಲ್ಮನವಿ ಪ್ರಕಾರ, ಫೆಬ್ರವರಿ 8, 2011 ರಂದು ಅವರ ಮದುವೆ ನಡೆದಿತ್ತು. ಮದುವೆಯಾದ ಕೆಲವು ದಿನಗಳ ನಂತರ ಆತನ ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ವಿಕಾಸ್ ನಗರದ ಪುರುಷನೊಂದಿಗೆ ಆತನ ಪತ್ನಿಗೆ ಸಂಬಂಧವಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
ಈ ಬಗ್ಗೆ ಪಿಜಿಐ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಲ್ಲದೇ, ಫಿರ್ಯಾದಿಯು ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನದ ಪ್ರಕರಣವನ್ನು ದಾಖಲಿಸಿದ್ದರು. ಅದರಲ್ಲಿ ಆತನ ಹೆಂಡತಿ ಮತ್ತು ಆಕೆ ಸಂಬಂಧ ಹೊಂದಿರುವ ವ್ಯಕ್ತಿಯನ್ನು ಪಾರ್ಟಿ ಮಾಡಲಾಗಿತ್ತು.
ಇದನ್ನೂ ಓದಿ:ಕರ್ನಾಟಕ ಹೈಕೋರ್ಟ್ ಸಿಜೆಯಾಗಿ ಪಿಬಿ ವರಾಲೆ ನೇಮಕ: ಕೇಂದ್ರದ ಅಧಿಸೂಚನೆ
ಮಹಿಳೆ, ಪತಿ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳದ ಪ್ರಕರಣವನ್ನು ದಾಖಲಿಸಿದ್ದರು. ಆದರೆ, ಅವರೆಲ್ಲರನ್ನೂ ಆಕೆಯ ವಿವಾಹೇತರ ಸಂಬಂಧದ ಹಿನ್ನೆಲೆ ಹಾಗೂ ಆಧಾರದ ಮೇಲೆ ಬಿಡುಗಡೆ ಮಾಡಲಾಗಿತ್ತು. ಅಷ್ಟೇ ಅಲ್ಲ, ಫಿರ್ಯಾದುದಾರರ ಪತ್ನಿ ಇನ್ನೊಬ್ಬರೊಂದಿಗೆ ಸಂಬಂಧ ಹೊಂದಿದ್ದರು. ಇದನ್ನು ಸಂಬಂಧಿತ ವ್ಯಕ್ತಿಯೂ ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸಿರುವ ಉತ್ತರದಲ್ಲಿ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಸೆಷನ್ಸ್ ನ್ಯಾಯಾಲಯ ಈ ತೀರ್ಪು ನೀಡಿದೆ.