ಸುಲ್ತಾನ್ಪುರ್(ಯುಪಿ): ಖಾಸಗಿ ಆಸ್ಪತ್ರೆಯಲ್ಲಿ ನಕಲಿ ವೈದ್ಯನೊಬ್ಬ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲು ಪ್ರಯತ್ನಿಸಿ ಮಹಿಳೆ ಮತ್ತು ನವಜಾತ ಶಿಶುವಿನ ಸಾವಿಗೆ ಕಾರಣವಾಗಿರುವ ಮನಕಲಕುವ ಘಟನೆ ಉತ್ತರ ಪ್ರದೇಶದ ಸುಲ್ತಾನ್ಪುರ್ ಜಿಲ್ಲೆಯ ಸೈನಿ ಗ್ರಾಮದಲ್ಲಿ ನಡೆದಿದೆ.
ಅರ್ಧಕ್ಕೆ ಶಾಲೆ ಬಿಟ್ಟಿದ್ದವನಿಂದ ಸಿಸೇರಿಯನ್ ಹೆರಿಗೆ: ತಾಯಿ, ಮಗು ಸಾವು ಆಘಾತಕಾರಿ ವಿಷಯವೆಂದರೆ ಆತ ಹೈಸ್ಕೂಲ್ ಹಂತದಲ್ಲೇ ಶಾಲೆಬಿಟ್ಟಿದ್ದ. ಅಲ್ಲದೆ ಶಸ್ತ್ರಚಿಕಿತ್ಸೆ ಮಾಡಲು ಕ್ಷೌರ ಮಾಡುವ ರೇಸರ್ ಉಪಯೋಗಿಸಿದ್ದಾನೆ ಎಂದು ತಿಳಿದುಬಂದಿದೆ. ಮಾರ್ಚ್ 17ರಂದೇ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಮತ್ತು ಸಹಚರರನ್ನು ಬಂಧಿಸಿದ ನಂತರ ಶನಿವಾರ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಯನ್ನು ನಕಲಿ ವೈದ್ಯನನ್ನು ರಾಜೇಂದ್ರ ಶುಕ್ಲಾ ಎಂದು ಗುರುತಿಸಲಾಗಿದ್ದು. ಈತ 'ಮಾ ಶಾರದ' ಎಂಬ ಆಸ್ಪತ್ರೆಯಲ್ಲಿ ಮಹಿಳೆಗೆ ಸರ್ಜರಿ ಮಾಡಲು ಪ್ರಯತ್ನಿಸಿ ಮುಗ್ದ ಜೀವಗಳ ಸಾವಿಗೆ ಕಾರಣನಾಗಿದ್ದಾನೆ.
ಘಟನೆ ವಿವರ
30 ವರ್ಷದ ಪೂನಮ್ ಎಂಬ ಪುರ್ವ ಗ್ರಾಮದ ಮಹಿಳೆ ಹೆರಿಗೆ ನೋವಿನಿಂದ ಮಾ ಶಾರದ ಆಸ್ಪತ್ರೆಗೆ ದಾವಿಸಿದ್ದಾರೆ. ಆಕೆಯ ಸ್ಥಿತಿ ಗಂಭೀರವಾಗಿದ್ದರಿಂದ ಶುಕ್ಲಾ ತಾತ್ಕಾಲಿಕ ಆಪರೇಷನ್ ಟೇಬಲ್ನಲ್ಲಿ ರೇಜರ್ ಬ್ಲೇಡ್ ಉಪಯೋಗಿಸಿ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದಾನೆ. ಇದರಿಂದ ಪೂನಂ ಅವರಿಗೆ ತೀವ್ರವಾಗಿ ರಕ್ತಸ್ರಾವವಾಗಿದೆ. ತಕ್ಷಣ ಅವರ ಪತಿಗೆ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದಾರೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ತಾಯಿ ಮಗು ಇಬ್ಬರೂ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
" ಮಹಿಳೆಯ ಪತಿ ರಾಜರಾಮ್ ತಮ್ಮ ಪತ್ನಿ ಮತ್ತು ಮಗು ವೈದ್ಯಕೀಯ ಅಜಾಗರೂಕತೆಯಿಂದ ಸಾವನ್ನಪ್ಪಿದ್ದಾರೆ ಎಂದು ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ನಂತರ ನಾವು ಆ ಕ್ಲೀನಿಕ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅದು ನೋಂದಣಿಯಾಗಿರಲಿಲ್ಲ ಮತ್ತು ಸರ್ಜರಿ ಮಾಡುವುದಕ್ಕೆ ಯಾವುದೇ ಮೂಲಭೂತ ಸೌಕರ್ಯಗಳಿರಲಿಲ್ಲ ಎಂಬುದನ್ನು ಕಂಡುಕೊಂಡೆವು. ಅಲ್ಲದೆ ವೈದ್ಯ ಶಸ್ತ್ರಚಿಕಿತ್ಸೆಯನ್ನು ಮಾಡಲು ರೇಜರ್ ಬ್ಲೇಡ್ಗಳನ್ನು ಬಳಸಿದ್ದಾರೆ ಎಂಬುದು ತಿಳಿದುಬಂತು. ಆಘಾತಕಾರಿ ವಿಷಯವೆಂದರೆ ಶಸ್ತ್ರಚಿಕಿತ್ಸೆ ಮಾಡಿಸಿದಾತ 8ನೇ ತರಗತಿಯಲ್ಲೆ ಶಾಲೆಯನ್ನು ಬಿಟ್ಟಿದ್ದ. ಆದರೂ ಆತ ಕಳೆದ ಒಂದು ವರ್ಷದಿಂದ ಅದೇ ಕ್ಲೀನಿಕ್ನಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ ಎಂದು ಎಸ್ಪಿ ಅರವಿಂದ್ ಚೌದರಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೇಶ್ ಕುಮಾರ್ ಸಾಹ್ನಿ, ರಾಜೇಂದ್ರ ಪ್ರಸಾದ್ ಶುಕ್ಲಾ ಮತ್ತು ಆಸ್ಪತ್ರೆಯ ಕೋಆರ್ಡಿನೇಟರ್ ಅರುಣ್ ಮಿಶ್ರಾ ಎಂಬುವವರನ್ನು ಬಂಧಿಸಲಾಗಿದೆ. ಮಹಿಳೆಯ ಸಾವಿಗೆ ಕಾರಣನಾದ ಆರೋಪಿಯ ಮೇಲೆ ಹತ್ಯೆ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.