ಗುರುಗ್ರಾಮ (ಹರಿಯಾಣ):ಕೊರೊನಾ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಅದೆಷ್ಟೋ ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ. ಇಂದಿಗೂ ಜಗತ್ತು ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಇಲ್ಲೊಬ್ಬ ಮಹಿಳೆ ಸೋಂಕಿಗೆ ಹೆದರಿ ತನ್ನ ಮಗನ ಸಮೇತ ಮೂರು ವರ್ಷಗಳಿಂದ ಒಂದೇ ಮನೆಯಲ್ಲಿ ಲಾಕ್ ಆದ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದ ಆರೋಗ್ಯ ಇಲಾಖೆ ಅಧಿಕಾರಿಗಳು ಇಬ್ಬರನ್ನೂ ರಕ್ಷಿಸಿದ್ದಾರೆ.
ಘಟನೆಯ ವಿವರ:ಗುರುಗ್ರಾಮದ ಚಕ್ಕರ್ಪುರ ಪ್ರದೇಶದ ನಿವಾಸಿ ಮಹಿಳೆಯೊಬ್ಬರು ಕೋವಿಡ್-19 ಸೋಂಕಿಗೆ ಒಳಗಾಗುವ ಭಯ ಹೊಂದಿದ್ದರು. ಇದರಿಂದ ಆಕೆ ತಾನಿದ್ದ ಬಾಡಿಗೆ ಮನೆಯಲ್ಲೇ ಉಳಿದುಕೊಂಡಿದ್ದರು. ತನಗಿರುವ ಏಕೈಕ ಪುತ್ರ ಎಲ್ಲಿ ಕೋವಿಡ್ಗೆ ತುತ್ತಾಗುತ್ತಾನೆ ಎಂಬ ಭಯ ಆಕೆಯನ್ನು ಕಾಡಿತ್ತು. ಹೀಗಾಗಿ ಮಗನನ್ನು ಯಾವ ಕಾರಣಕ್ಕೂ ಮನೆಯಿಂದ ಆಚೆ ಬರಲು ಬಿಟ್ಟಿರಲಿಲ್ಲ.
2020 ರಲ್ಲಿ ಮೊದಲ ಲಾಕ್ಡೌನ್ ನಿರ್ಬಂಧಗಳನ್ನು ತೆರವು ಮಾಡಿದ ಬಳಿಕ ಆಕೆ ಇನ್ನಷ್ಟು ಭೀತಿಗೆ ಒಳಗಾಗಿದ್ದರು. ಕೊರೊನಾ ಎಲ್ಲಿ ತನ್ನ ಕುಟುಂಬವನ್ನು ಬಲಿ ಪಡೆಯುತ್ತದೆ ಎಂಬ ಭೀತಿಯಲ್ಲಿ ಮಗನನ್ನು ಮನೆಯಿಂದ ಹೊರ ಕಳುಹಿಸದೇ ತನ್ನಲ್ಲೇ ಉಳಿಸಿಕೊಂಡಿದ್ದರು. ಅದಲ್ಲದೇ ತಾನೂ ಮನೆ ಹೊಸ್ತಿಲು ದಾಟಿ ಸಹ ಹೊರಬಂದಿರಲಿಲ್ಲ.
ದಿನದ ಊಟಕ್ಕಾಗಿ ಪತಿಯಿಂದ ನೆರವು ಪಡೆದುಕೊಳ್ಳುತ್ತಿದ್ದರು. ವಿಚಿತ್ರ ಅಂದರೆ, ಲಾಕ್ಡೌನ್ ತೆರವಾದಾಗ ಪತಿ ಮನೆಯಿಂದ ಆಚೆ ಬಂದಿದ್ದರು. ಇದಾದ ಬಳಿಕ ಅವರನ್ನೂ ಮನೆಯೊಳಗೆ ಸೇರಿಸಿಕೊಳ್ಳಲು ಬಿಟ್ಟಿರಲಿಲ್ಲ. ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿರುವ ಮಹಿಳೆಯ ಪತಿ ಸುಜನ್ ಮಾಝಿ ಎಂಬುವರು ದಿನಸಿಯನ್ನು ಮನೆಯ ಮುಖ್ಯ ಬಾಗಿಲಿಗೆ ತಂದು ಇಡುತ್ತಿದ್ದರು.
ಮನೆಯ ಬಾಡಿಗೆ, ವಿದ್ಯುತ್, ನೀರಿನ ಬಿಲ್ ಸೇರಿದಂತೆ ಎಲ್ಲ ಅಗತ್ಯಗಳನ್ನು ಅವರು ಹೊರಗಡೆಯಿಂದಲೇ ಪೂರೈಸುತ್ತಿದ್ದರು. ವಿಡಿಯೋ ಕಾಲ್ ಮೂಲಕ ಅವರು ಮಾತನಾಡಿಕೊಳ್ಳುತ್ತಿದ್ದರು. ಹೀಗೆ ಮೂರು ವರ್ಷದಿಂದ ಆಕೆ ಮಗನ ಸಮೇತ ಮನೆಯಲ್ಲಿ ಬಂಧಿಯಾಗಿದ್ದರು. ಪತಿ ಹಲವು ಬಾರಿ ಮನವಿ ಮಾಡಿದರೂ ಆಕೆ ಮನೆಯಿಂದ ಮಾತ್ರ ಹೊರಗೆ ಬಂದಿರಲಿಲ್ಲ.
ಪತಿ ನೀಡಿದ ಮಾಹಿತಿ:ಇನ್ನು, ಮೂರು ವರ್ಷದಿಂದ ಒಂದೇ ಮನೆಯಲ್ಲಿ ತಮ್ಮನ್ನು ಕೂಡಿ ಹಾಕಿಕೊಂಡಿದ್ದ ಮಹಿಳೆ ಮತ್ತು ಪುತ್ರನ ಬಗ್ಗೆ ಪತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯತತ್ಪರರಾದ ಪೊಲೀಸರು, ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸದಸ್ಯರ ತಂಡ ಅವರಿದ್ದ ನಿವಾಸಕ್ಕೆ ತೆರಳಿ, ಮುಖ್ಯ ಬಾಗಿಲು ಮುರಿದು ಮಹಿಳೆ ಮತ್ತು ಆಕೆಯ 10 ವರ್ಷದ ಮಗನನ್ನು ರಕ್ಷಿಸಿದ್ದಾರೆ.
ಕಸದ ತೊಟ್ಟಿಯಾಗಿದ್ದ ಮನೆ:ಇನ್ನು ಮೂರು ವರ್ಷಗಳಿಂದ ತಾಯಿ, ಮಗ ಹೊರಬಾರದ ಕಾರಣ ಮನೆಯಲ್ಲಿ ಅನಗತ್ಯ ವಸ್ತುಗಳು, ಕೂದಲು, ದಿನಸಿಗಳ ರಾಶಿ ಉಳಿದುಕೊಂಡು ಕಸದ ತೊಟ್ಟಿಯೇ ನಿರ್ಮಾಣವಾಗಿತ್ತು. ತಾಯಿ ಮನೆಯಲ್ಲೇ ಮಗನ ಮತ್ತು ಆಕೆಯ ಕೂದಲನ್ನು ಕತ್ತರಿಸಿಕೊಂಡಿದ್ದರು. ಗ್ಯಾಸ್ ಸ್ಟೌ ಬದಲು ಇಂಡಕ್ಷನ್ ಮೂಲಕ ಅಡುಗೆ ಮಾಡಿಕೊಂಡಿದ್ದರು. ಮೂರು ವರ್ಷಗಳಿಂದ ಮನೆಯಲ್ಲಿದ್ದ ಕಸವನ್ನು ಕೂಡ ಹೊರಗೆ ಹಾಕಿರಲಿಲ್ಲ, ಈ ವೇಳೆ ಮನೆಗೆ ಯಾರೂ ಭೇಟಿ ನೀಡಿರಲಿಲ್ಲ.
ಮಗು ಮನೆಯ ಗೋಡೆಗಳ ಮೇಲೆ ಪೇಂಟಿಂಗ್ ಮಾಡುತ್ತಿತ್ತು. ಪೆನ್ಸಿಲ್‌ನಿಂದ ಮಾತ್ರ ಕಲಿಕೆ ಮಾಡುತ್ತಿತ್ತು. ಆಘಾತಕಾರಿ ಸಂಗತಿಯೆಂದರೆ, ಮಹಿಳೆಯ ಮಗ ಕಳೆದ ಮೂರು ವರ್ಷಗಳಿಂದ ಸೂರ್ಯನ ಬೆಳಕನ್ನೇ ಕಂಡಿಲ್ಲವಂತೆ. ಇಷ್ಟು ದಿನ ಇಬ್ಬರೂ ಮನೆಯೊಳಗೆ ಬೀಗ ಹಾಕಿಕೊಂಡಿರುವ ಬಗ್ಗೆ ಅಕ್ಕಪಕ್ಕದವರಿಗೆ ಸಣ್ಣ ಸುಳಿವು ಕೂಡ ಸಿಕ್ಕಿರಲಿಲ್ಲ ಎಂದು ತಿಳಿದುಬಂದಿದೆ.
ಓದಿ: ನೆಲಮಂಗಲ: ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್ ಮುಖಂಡರು