ನವದೆಹಲಿ/ಗಾಜಿಯಾಬಾದ್:ಮದುವೆಯಾಗಲು ನಿರಾಕರಿಸಿದ ಪ್ರೇಮಿಯನ್ನು ಪ್ರಿಯತಮೆಯೋರ್ವಳು ಕತ್ತು ಕುಯ್ದು ಸೂಟ್ಕೇಸ್ನಲ್ಲಿ ತುಂಬಿರುವ ಘಟನೆ ಗಾಜಿಯಾಬಾದ್ನಲ್ಲಿ ನಡೆದಿದೆ. ಕೃತ್ಯವೆಸಗಿರುವ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ತಿಲಾ ಮೋರ್ ಪೊಲೀಸ್ ಠಾಣಾ ವ್ಯಾಪ್ತಿಯ ತುಳಸಿ ನಿಕೇತನ ಪ್ರದೇಶದಲ್ಲಿ ಘಟನೆ ನಡೆದಿದೆ. ಕಳೆದ ನಾಲ್ಕು ವರ್ಷಗಳಿಂದ ಹಿಂದೂ ಸಮುದಾಯದ ಮಹಿಳೆ ಹಾಗೂ ಫಿರೋಜ್ ಎಂಬಾತ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದರು. ಕೆಲವು ದಿನಗಳ ಹಿಂದೆ ತನ್ನನ್ನು ಮದುವೆಯಾಗುವಂತೆ ಯುವತಿ ಆತನ ಮೇಲೆ ಒತ್ತಡ ಹಾಕಿದ್ದಾಳೆ. ಇದಕ್ಕೆ ಯುವಕ ನಿರಾಕರಿಸಿದ್ದ. ಇದರಿಂದ ಕೋಪಗೊಂಡ ಯುವತಿ ಬ್ಲೇಡ್‌ನಿಂದ ಆತನ ಕತ್ತು ಸೀಳಿ, ಹತ್ಯೆ ಮಾಡಿದ್ದಾಳೆ. ಮೃತದೇಹವನ್ನು ಹೊರಗಡೆ ಸಾಗಿಸಲು ದೊಡ್ಡ ಸೂಟ್ಕೇಸ್ ಖರೀದಿಸಿದ್ದಳು. ಸೂಟ್ಕೇಸ್ನಲ್ಲಿ ಮೃತದೇಹ ತುಂಬಿಕೊಂಡು ಹೊರಹೋಗುತ್ತಿದ್ದಾಗ ಪೊಲೀಸರಿಗೆ ಅನುಮಾನ ಬಂದಿದೆ. ವಿಚಾರಣೆ ನಡೆಸಿ ಸೂಟ್ಕೇಸ್ ತಪಾಸಣೆ ನಡೆಸಿದಾಗ ಪ್ರಕರಣ ಬಯಲಾಗಿದೆ.