ಸಿದ್ದಿಪೇಟೆ(ಆಂಧ್ರಪ್ರದೇಶ) :ತನ್ನ ಪೋಷಕರ ಒತ್ತಾಯಕ್ಕೆ ಮದುವೆಯಾದ ಯುವತಿಯೋರ್ವಳು ಮದುವೆಯಾದ 36 ದಿನಕ್ಕೇ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿರುವ ಘಟನೆ ಸಿದ್ದಿಪೇಟೆ ಜಿಲ್ಲೆಯ ಕೋನಾಪುರಂನಲ್ಲಿ ನಡೆದಿದೆ. ಸಿದ್ದಿಪೇಟೆ ಜಿಲ್ಲೆಯಲ್ಲಿ ಕಳೆದ ತಿಂಗಳು 28ರಂದು ನಡೆದಿದ್ದ ಕೊಲೆ ಪ್ರಕರಣದ ವಿವರವನ್ನು ಪಟ್ಟಣದ ಸಿಐ ವಿ.ರವಿಕುಮಾರ್ ಭಾನುವಾರ ಬಹಿರಂಗಪಡಿಸಿದ್ದಾರೆ.
ಮೊದಲ ಬಾರಿಗೆ ಅನ್ನದಲ್ಲಿ ವಿಷ ಹಾಕಿ ಗಂಡನನ್ನು ಕೊಲ್ಲಲು ಪ್ರಯತ್ನಿಸಿದ್ದ ಯುವತಿ ವಿಫಲಳಾಗಿದ್ದಳು. ಎರಡನೇ ಬಾರಿಗೆ ಗಂಡನ ಕತ್ತು ಹಿಸುಕಿ ಸಾಯಿಸಿ, ಎದೆನೋವಿನಿಂದ ಸಾವನ್ನಪ್ಪಿರುವುದಾಗಿ ಎಲ್ಲರನ್ನು ನಂಬಿಸಿದ್ದಳು. ಆದರೆ, ಇದು ಸ್ವಾಭಾವಿಕ ಸಾವಲ್ಲ. ಮಡದಿಯೇ ಪತಿಯನ್ನು ಕೊಲೆ ಮಾಡಿದ್ದಾಳೆ ಎಂಬುದನ್ನು ತನಿಖೆಯಲ್ಲಿ ಪತ್ತೆ ಹಚ್ಚಿರುವ ಪೊಲೀಸರು ಯುವತಿಯನ್ನು ಬಂಧಿಸಿದ್ದಾರೆ. ಈ ಎಲ್ಲಾ ಘಟನೆ ಮದುವೆಯಾದ 36 ದಿನಗಳೊಳಗೆ ನಡೆದಿರುವುದೇ ಅಚ್ಚರಿ ಮೂಡಿಸಿದೆ.
ತೊಗುಟ ವಲಯದ ಗುಡಿಕಂದುಲ ಗ್ರಾಮದ ಶ್ಯಾಮಲಾ (19) ಅವರಿಗೆ ದುಬ್ಬಾಕ ಮಂಡಲ ಚಿನ್ನಾ ನಿಜಾಂಪೇಟದ ಕೋನಾಪುರಂ ಚಂದ್ರಶೇಖರ್ (24) ಎಂಬುವರ ಜೊತೆ ಮಾರ್ಚ್ 23ರಂದು ವಿವಾಹವಾಗಿತ್ತು. ಗುಡಿಕಂದುಲ ಮೂಲದ ಶಿವಕುಮಾರ್ (20) ಎಂಬಾತ ಮೂರು ವರ್ಷಗಳಿಂದ ಶ್ಯಾಮಲಾ ಅವರನ್ನು ಪ್ರೀತಿಸುತ್ತಿದ್ದನು.
ಮೊದಲ ಪ್ರಯತ್ನ ವಿಫಲ: ಹಿರಿಯರ ಒತ್ತಡಕ್ಕೆ ಮಣಿದು ಚಂದ್ರಶೇಖರ್ ಎಂಬಾತನನ್ನು ಮದುವೆಯಾಗಿದ್ದ ಯುವತಿ ತನ್ನ ಗೆಳೆಯ ಶಿವನ ನೆರವಿನಿಂದ ಪತಿಯನ್ನು ಕೊಲ್ಲಲು ಯೋಜನೆ ರೂಪಿಸಿದ್ದಳು. ಏಪ್ರಿಲ್ 19ರಂದು ಅನ್ನದಲ್ಲಿ ವಿಷ ಬೆರೆಸಿ ಪತಿಗೆ ಬಡಿಸಿದ್ದಾಳೆ. ಆದರೆ, ಅದೃಷ್ಟವಶಾತ್ ಆತನನ್ನು ಆಸ್ಪತ್ರೆಗೆ ದಾಖಲಿಸಿದ ಕಾರಣ ಬದುಕುಳಿದಿದ್ದನು. ಆಗ ಅದು ಫುಡ್ಪಾಯಿಸನ್ ಆಗಿರಬಹುದು ಎಂದು ಎಲ್ಲರು ಭಾವಿಸಿದ್ದರು.