ಜೈಪುರ(ರಾಜಸ್ಥಾನ):ದೇಶಾದ್ಯಂತ ಅತ್ಯಾಚಾರದಂತಹ ಅಮಾನವೀಯ ಕೃತ್ಯಗಳು ನಿಲ್ಲುವ ಲಕ್ಷಣ ಗೋಚರಿಸುತ್ತಿಲ್ಲ. ರಾಜಸ್ಥಾನದಲ್ಲಿ ಹೊಸ ಪ್ರಕರಣ ಬೆಳಕಿಗೆ ಬಂದಿದೆ. ರೈಲ್ವೆ ಪೊಲೀಸ್ ಠಾಣೆ ಪಕ್ಕದಲ್ಲೇ ಮಹಿಳೆಯೋರ್ವಳ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಜೈಪುರದ ಜಿಆರ್ಪಿ ಠಾಣೆ ಬಳಿ ಘಟನೆ ನಡೆದಿದೆ. ಐವರು ದುಷ್ಕೃತ್ಯವೆಸಗಿದ್ದಾರೆ. ರೈಲ್ವೆ ಪೊಲೀಸ್ ಠಾಣೆಯಿಂದ ಕೇವಲ 500 ಮೀಟರ್ ದೂರದಲ್ಲಿ ಘಟನೆ ನಡೆದಿದೆ. ಸಂತ್ರಸ್ತೆ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಘಟನೆ ವಿವರ: ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಮಹಿಳೆ ತನ್ನ ಪತಿಗೆ ಆಹಾರ ಪಡೆದುಕೊಳ್ಳಲೆಂದು ನಿಲ್ದಾಣದಿಂದ ಹೊರ ಬಂದಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಮಹಿಳೆಯನ್ನು ಅಪಹರಿಸಿದ್ದಾರೆ.
ಪೊಲೀಸ್ ಠಾಣಾಧಿಕಾರಿ ಸಂಪತ್ ರಾಜ್ ಮಾತನಾಡಿ, 35 ವರ್ಷದ ಸಂತ್ರಸ್ತೆಯು ತನ್ನ ಪತಿ ಜೊತೆ ರೈಲಿನಲ್ಲಿ ಪ್ರಯಾಣಿಸಲು ಜೈಪುರ ರೈಲು ನಿಲ್ದಾಣಕ್ಕೆ ಬಂದಿದ್ದರು. ರೈಲು ಬರಲು ಸಮಯವಿದ್ದ ಕಾರಣ ಪತಿಗೆ ಆಹಾರ ತೆಗೆದುಕೊಂಡು ಬರಲು ನಿಲ್ದಾಣದಿಂದ ಹೊರಗಡೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿ ನಿಂತಿದ್ದ ಯುವಕರ ಬಳಿ ಹತ್ತಿರದಲ್ಲಿ ರೆಸ್ಟೋರೆಂಟ್ ಬಗ್ಗೆ ವಿಚಾರಿಸಿದ್ದಾರೆ. ರೆಸ್ಟೋರೆಂಟ್ಗೆ ಕರೆದೊಯ್ಯುವ ನೆಪದಲ್ಲಿ ದುಷ್ಕರ್ಮಿಗಳು ಆಕೆಯನ್ನು ಬೇರೆ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಕಾರಿನಲ್ಲಿ ಚಲಿಸುತ್ತಿದ್ದ ಮಹಿಳೆ ಅಪಹರಿಸಿ ಲೈಂಗಿಕ ದೌರ್ಜನ್ಯ.. ಬಾಲಾಪರಾಧಿ ಸೇರಿ ಐವರ ಬಂಧನ
ಘಟನೆಯ ಬೆನ್ನಲ್ಲೇ ಐವರು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸಂತ್ರಸ್ತೆಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಆರೋಪಿಗಳಿಗೋಸ್ಕರ ಬಲೆ ಬೀಸಲಾಗಿದೆ. ರೈಲ್ವೇ ನಿಲ್ದಾಣದ ಸುತ್ತಮುತ್ತ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸಲಾಗ್ತಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.