ನೋಯ್ಡಾ(ಉತ್ತರ ಪ್ರದೇಶ): ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಯುವತಿಯ ಮೇಲೆ ಐವರು ದುರುಳರು ಸಾಮೂಹಿಕ ಅತ್ಯಾಚಾರ ಎಸಗಿರುವ ದುಷ್ಕೃತ್ಯಕ್ಕೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇಬ್ಬರು ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ.
ಕಳೆದ ವರ್ಷದ ಜೂನ್‌ನಲ್ಲಿ ಸೆಕ್ಟರ್ 38ರ ಮಾಲ್‌ವೊಂದರ ಪಾರ್ಕಿಂಗ್ ಸ್ಥಳದಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು 26 ವರ್ಷದ ಯುವತಿ ಆರೋಪಿಸಿದ್ದರು. ಆರೋಪಿಗಳು ಪ್ರಾಣ ಬೆದರಿಕೆ ಹಾಕಿದ್ದರಿಂದ ಯುವತಿ ಪೊಲೀಸರಿಗೆ ದೂರು ನೀಡಿರಲಿಲ್ಲ. ಆದರೆ ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದಾಗ ಡಿಸೆಂಬರ್ 30ರಂದು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಸ್ಕ್ರ್ಯಾಪ್ ಡೀಲರ್ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯುವತಿಯ ದೂರಿನ ವಿವರ: "ಜೂನ್‌ನಲ್ಲಿ ರಾಜ್‌ಕುಮಾರ್ ಎಂಬಾತ ನನ್ನ ಸಂಪರ್ಕಕ್ಕೆ ಬಂದಿದ್ದ. ನನಗೆ ಉದ್ಯೋಗದ ಭರವಸೆ ನೀಡಿದ್ದ. ಜೂ.12ರಂದು ದಾಖಲೆಗಳೊಂದಿಗೆ ಬರಲು ರಾಜ್‌ಕುಮಾರ್ ನನಗೆ ಹೇಳಿದ್ದಾನೆ. ಆತ ನನ್ನನ್ನು ತನ್ನ ಸಹಚರ ಮೆಹ್ಮ್ ಎಂಬಾತನನ್ನು ಭೇಟಿಯಾಗುವಂತೆ ಸೂಚಿಸಿದ. ಆಗ ಆತ, ರವಿ ಎಂಬಾತ ನಿಮಗೆ ಕೆಲಸ ಹುಡುಕಲು ಸಹಾಯ ಮಾಡುತ್ತಾರೆ ಎಂದಿದ್ದನು. ಇಬ್ಬರನ್ನು ನಂಬಿ ಜೂನ್ 19ರಂದು ಅವರೊಂದಿಗೆ ಶಾಪಿಂಗ್ ಮಾಲ್‌ಗೆ ಹೋಗಿದ್ದೆ. ಅವರು ಕಾರನ್ನು ಪಾರ್ಕಿಂಗ್ ಪ್ರದೇಶದೆಡೆ ತೆಗೆದುಕೊಂಡು ಹೋದರು. ರವಿ, ಆಜಾದ್ ಮತ್ತು ವಿಕಾಸ್ ಎಂದು ಗುರುತಿಸಲಾದ ಮೂವರು ಪಾರ್ಕಿಂಗ್ ಸ್ಥಳದಲ್ಲಿ ಅವರೊಂದಿಗೆ ಸೇರಿಕೊಂಡರು. ರವಿ ನನ್ನನ್ನು ಕಾರಿನೊಳಗೆ ಕುಳಿತುಕೊಳ್ಳಲು ಹೇಳಿದನು. ಇದ್ದಕ್ಕಿದ್ದಂತೆ ಅವರು ಬಂದೂಕುಗಳನ್ನು ತೆಗೆದುಕೊಂಡು ನನ್ನತ್ತ ತೋರಿಸಿದರು. ಅವರು ನನ್ನನ್ನು ಅನುಚಿತವಾಗಿ ಸ್ಪರ್ಶಿಸಲು ಪ್ರಾರಂಭಿಸಿದರು ಮತ್ತು ಅತ್ಯಾಚಾರ ಎಸಗಿದರು. ರವಿ ಕೃತ್ಯವನ್ನು ವಿಡಿಯೋ ಮಾಡಿದ್ದಾನೆ. ಪೊಲೀಸರನ್ನು ಸಂಪರ್ಕಿಸಿದರೆ ವಿಡಿಯೋ ವೈರಲ್ ಮಾಡುವುದಾಗಿಯೂ ಮತ್ತು ನನ್ನನ್ನು ಹಾಗು ಕುಟುಂಬದವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಕಾರಣಕ್ಕೆ ಅಂದು ದೂರು ನೀಡಿರಲಿಲ್ಲ."
ಐವರು ಆರೋಪಿಗಳ ಮೇಲೆ ಭಾರತೀಯ ದಂಡ ಸಂಹಿತೆಯ ಐಪಿಸಿ ಸೆಕ್ಷನ್ 376 ಡಿ (ಗ್ಯಾಂಗ್ ರೇಪ್) ಮತ್ತು 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಅಡಿಯಲ್ಲಿ ಡಿಸೆಂಬರ್ 30ರಂದು ಸೆಕ್ಟರ್ 39 ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮ್ಯಾಜಿಸ್ಟ್ರೇಟ್ ಮುಂದೆ ಯುವತಿಯ ಹೇಳಿಕೆ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿದ್ದರು. ಜನವರಿ 1ರಂದು ಅಂದರೆ 24 ಗಂಟೆಗಳಲ್ಲಿ ರಾಜ್‌ಕುಮಾರ್, ವಿಕಾಸ್ ಮತ್ತು ಆಜಾದ್ ಎಂಬವರನ್ನು ಬಂಧಿಸಲಾಗಿದೆ. ರವಿ ಮತ್ತು ಮೆಹ್ಮ್ ತಲೆಮರೆಸಿಕೊಂಡಿದ್ದು, ಶೋಧ ನಡೆಯುತ್ತಿದೆ.
ಇದನ್ನೂ ಓದಿ:ವಿಶಾಖಪಟ್ಟಣಂ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; 8 ಮಂದಿ ಸೆರೆ