ಭೋಪಾಲ್(ಮಧ್ಯಪ್ರದೇಶ):ಸ್ಕೂಟರ್ ಹಿಂಬದಿಯಲ್ಲಿ ಕುಳಿತುಕೊಂಡಿದ್ದ ಯುವತಿಗೆ ಕೆಲವು ದುಷ್ಕರ್ಮಿಗಳು ಬಲವಂತದಿಂದ ಹಿಜಾಬ್ ತೆಗೆಸಿದ ಘಟನೆ ಭೋಪಾಲ್‌ನಲ್ಲಿ ಬೆಳಕಿಗೆ ಬಂದಿದೆ.
ಭೋಪಾಲ್ನ ಇಸ್ಲಾಂನಗರದಲ್ಲಿ ಯುವತಿ ಹಿಜಾಬ್ ಧರಿಸಿ ಓರ್ವ ಯುವಕನೊಂದಿಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದಳು. ಈ ವೇಳೆ ಅಡ್ಡಗಟ್ಟಿದ ದುಷ್ಕರ್ಮಿಗಳು ಆಕೆ ಹಿಂದೂ ಧರ್ಮೀಯ ಯುವಕನೊಂದಿಗೆ ತೆರಳುತ್ತಿದ್ದಾಳೆ ಎಂದು ಆಕೆ ಧರಿಸಿದ್ದ ಹಿಜಾಬ್ ತೆಗೆಯುವಂತೆ ಬಲವಂತ ಮಾಡಿದರು.
ವೈರಲ್ ಆದ ದೃಶ್ಯದಲ್ಲಿ, ಯುವತಿ ಹಿಜಾಬ್ ತೆಗೆಯಲು ಅಸಮಾಧಾನ ವ್ಯಕ್ತಪಡಿಸಿ, ಅಳುತ್ತಿರುವುದು ದಾಖಲಾಗಿದೆ. ಈ ಸಂದರ್ಭದಲ್ಲಿ ಓರ್ವ ದುಷ್ಕರ್ಮಿ, 'ಈ ಮಹಿಳೆ ನಮ್ಮ ಸಮುದಾಯಕ್ಕೆ ಅವಮಾನ' ಎಂದಿರುವುದು ಕೂಡಾ ಕೇಳಿಸುತ್ತದೆ.
ಯುವಕ ಹಿಂದೂ ಸಮುದಾಯಕ್ಕೆ ಸೇರಿದವನು, ಯುವತಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾಳೆ ಎಂದು ಭಾವಿಸಿದ ಕೆಲವರು ಸ್ಕೂಟರ್ ಅಡ್ಡಗಟ್ಟಿ, ಯುವತಿಯ ಹಿಜಾಬ್ ತೆಗೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು, ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಈ ಕುರಿತಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅಲ್ಲಿನ ಪೊಲೀಸ್ ಅಧಿಕಾರಿ ಆರ್.ಎಸ್.ವರ್ಮಾ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಇದನ್ನೂ ಓದಿ:'ವಿಶೇಷ ಸ್ಥಾನಮಾನ ರದ್ದಾಗುವ ಮುನ್ನ ಕೇಂದ್ರದ ಹಣ ಜಮ್ಮು ಕಾಶ್ಮೀರ ನಾಯಕರ ಜೇಬು ಸೇರುತ್ತಿತ್ತು'