ತೆಲಂಗಾಣ (ವಾರಂಗಲ್):ರ್ಯಾಗಿಂಗ್ನಿಂದ ಬೇಸತ್ತ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಬಿ.ಟೆಕ್ ಓದುತ್ತಿದ್ದ ಮೊತ್ತೊಬ್ಬ ವಿದ್ಯಾರ್ಥಿನಿ ಸಾವಿನ ಹಾದಿ ಹಿಡಿದ ಘಟನೆ ವಾರಂಗಲ್‌ನಲ್ಲಿ ನಡೆದಿದೆ. ರಕ್ಷಿತಾ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಸ್ನೇಹಿತನ ಕಿರುಕುಳ ತಾಳಲಾರದೇ ವಾರಂಗಲ್‌ನಲ್ಲಿರುವ ತನ್ನ ತಂದೆಯ ಸಂಬಂಧಿಕರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಿರುಕುಳ ನೀಡಿದ ಸ್ನೇಹಿತ ರಾಹುಲ್ ಎಂಬಾತನ ವಿರುದ್ಧ ಮೃತ ವಿದ್ಯಾರ್ಥಿನಿಯ ಪೋಷಕರು ದೂರು ದಾಖಲು ಮಾಡಿದ್ದಾರೆ.
ಸ್ನೇಹಿತನಿಂದ ನಿರಂತರ ಬೆದರಿಕೆ:ಭೂಪಾಲಪಲ್ಲಿಯ ಪಬ್ಬೋಜು ಶಂಕರ್ ಮತ್ತು ರಮಾದೇವಿ ದಂಪತಿಯ ಪುತ್ರಿ ರಕ್ಷಿತಾ ವಾರಂಗಲ್ ಜಿಲ್ಲೆಯ ನರಸಂಪೇಟದಲ್ಲಿರುವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್ನ (ECE) ಮೂರನೇ ವರ್ಷದಲ್ಲಿ ಓದುತ್ತಿದ್ದಳು. ಇತ್ತೀಚೆಗೆ ರಾಹುಲ್ ಎಂಬ ವ್ಯಕ್ತಿ ಕಿರುಕುಳ ನೀಡುತ್ತಿದ್ದ. ಈತ ರಕ್ಷಿತಾಗೆ 10ನೇ ತರಗತಿ ಓದುತ್ತಿರುವಾಗಲೇ ಪರಿಚಯವಾಗಿದ್ದ. ಈ ಹಿಂದೆ ಸೆರೆ ಹಿಡಿಯಲಾಗಿದ್ದ ಹಳೆಯ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ. ಈ ವಿಷಯವನ್ನು ರಕ್ಷಿತಾ ಕುಟುಂಬಸ್ಥರಿಗೂ ತಿಳಿಸಿದ್ದಳು. ಬಳಿಕ ಅವರು ಭೂಪಾಲಪಲ್ಲಿಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ರಾಹುಲ್ನನ್ನು ಕರೆದು ಕೌನ್ಸೆಲಿಂಗ್ ಸಹ ಮಾಡಿದ್ದರು. ಆದರೆ, ಆ ಕ್ಷಣಕ್ಕೆ ಸುಮ್ಮನಿದ್ದ ರಾಹುಲ್, ಕೆಲವು ದಿನಗಳ ಬಳಿಕ ಅದೇ ಚಾಳಿ ಮುಂದುವರೆಸಿದ್ದ. ಇತ್ತೀಚೆಗೆ ಈತನ ಕಿರುಕುಳ ಮಿತಿಮೀರಿತ್ತು.
ಸ್ನೇಹಿತನ ವಿರುದ್ಧ ದೂರು ದಾಖಲು: ಶಿವರಾತ್ರಿಯ ದಿನದಂದು ಕಾಲೇಜಿಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ರಕ್ಷಿತಾ ಭೂಪಾಲಪಲ್ಲಿಗೆ ಹೋಗಿದ್ದಳು. ಆದರೆ, ಅವಳು ಭೂಪಾಲಪಲ್ಲಿ ತಲುಪಿರುವ ಬಗ್ಗೆ ಮಾಹಿತಿ ಇರಲಿಲ್ಲ. ಈ ಬಗ್ಗೆ ಅನುಮಾನಗೊಂಡ ಪೋಷಕರು ಭೂಪಾಲಪಲ್ಲಿ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ದೂರು ದಾಖಲಾದ ಎರಡು ದಿನಗಳ ಬಳಿಕ ರಕ್ಷಿತಾ, ತಾನಾಗಿಯೇ ಮನೆ ತಲುಪಿದ್ದಳು. ಈ ಬಗ್ಗೆ ಆಕೆಯ ಪೋಷಕರು ಮನೆ ತಲುಪಿರುವುದಾಗಿ ಪೊಲೀಸರಿಗೆ ಖಚಿತಪಡಿಸಿದ್ದರು. ಮನಸ್ಸಿನಲ್ಲಿರುವ ದುಗುಡ ಅರ್ಥೈಸಿಕೊಂಡಿದ್ದ ಪೋಷಕರು ಆಕೆಯನ್ನು ಕೆಲವು ದಿನಗಳ ಮಟ್ಟಿಗೆ ವಾರಂಗಲ್‌ನ ರಾಮಣ್ಣಪೇಟೆಯಲ್ಲಿರುವ ಸಹೋದರನ ಮನೆಗೆ ಕಳುಹಿಸಿದ್ದರು. ಆದರೆ, ಈ ಕಿರುಕುಳ ಪ್ರಕರಣವನ್ನು ಮನಸ್ಸಿಗೆ ಹಚ್ಚಿಕೊಂಡಿದ್ದರಿಂದ ಅದರಿಂದ ಹೊರಬರಲಾರದೇ ಭಾನುವಾರ ರಾತ್ರಿ ರಕ್ಷಿತಾ, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪೋಷಕರು ತಮ್ಮ ದೂರು ಪ್ರತಿಯಲ್ಲಿ ದಾಖಲು ಮಾಡಿದ್ದಾರೆ.