ಹಿಸಾರ್ (ಹರಿಯಾಣ): ಹಿಸಾರ್ ಜಿಲ್ಲೆಯಲ್ಲಿ ಅಕ್ರಮ ಗರ್ಭಪಾತಕ್ಕೆ ಯತ್ನಿಸಿದ ಯುವತಿಯೊಬ್ಬರು (19) ಮೃತಪಟ್ಟಿದ್ದಾರೆ ಎಂದು ಇಲ್ಲಿನ ಪೊಲೀಸರು ತಿಳಿಸಿದ್ದಾರೆ. ಸೋಮವಾರ ರಾತ್ರಿ ಆಗ್ರೋಹಾದಲ್ಲಿರುವ ಮಹಾರಾಜ ಅಗ್ರಸೇನ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಯುವತಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮಹಾರಾಜ ಅಗ್ರಸೇನ್ ವೈದ್ಯಕೀಯ ಕಾಲೇಜು ನಿರ್ದೇಶಕಿ ಅಲ್ಕಾ ಛಾಬ್ರಾ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ, "ಮಾ.16 ರಂದು ಸಂಜೆ 6 ಗಂಟೆಗೆ ಅಕ್ರಮ ಗರ್ಭಪಾತಕ್ಕೆ ಬಲಿಯಾದ ಯುವತಿಯನ್ನು ಗಂಭೀರ ಸ್ಥಿತಿಯಲ್ಲಿ ಕಾಲೇಜಿಗೆ ದಾಖಲಿಸಲಾಗಿತ್ತು. ಆಕೆ ಸೆಪ್ಟಿಕ್ ಶಾಕ್(ಅಂಗಾಂಗ ವೈಫಲ್ಯ ಮತ್ತು ಅಪಾಯಕಾರಿ ಕಡಿಮೆ ರಕ್ತದೊತ್ತಡವನ್ನು ಉಂಟುಮಾಡುವ ಸೋಂಕು)ಗೆ ಒಳಗಾಗಿದ್ದಳು. ಆಕೆಯ ಕರುಳುಗಳು ಹೊರಬಂದಿದ್ದು, ಗರ್ಭಾಶಯದಲ್ಲಿ ಗಾಯಗಳಾಗಿತ್ತು. ಆಕೆಯ ಕರುಳು ಮತ್ತು ಗರ್ಭಾಶಯವನ್ನು ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮಹಿಳೆಯ ಮೂತ್ರಪಿಂಡಗಳು ಸಹ ವಿಫಲವಾಗಿದ್ದು, ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಆದರೆ ಬಹು ಅಂಗಾಂಗ ವೈಫಲ್ಯದಿಂದ ಮಹಿಳೆ ಸಾವನ್ನಪ್ಪಿದ್ದಾರೆ" ಎಂದು ತಿಳಿಸಲಾಗಿದೆ.
ಮಹಿಳೆ ಅವಿವಾಹಿತೆ. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು. ಮಾರ್ಚ್ 14 ರಂದು ಆಕೆಯ ಸಂಬಂಧಿಕರು ಆಕೆಯನ್ನು ಗರ್ಭಪಾತಕ್ಕಾಗಿ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಗರ್ಭಪಾತಕ್ಕೆ ಪ್ರಯತ್ನಿಸಿದ ಬಳಿಕ ಆಕೆಯ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಆಕೆಯನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ದು ಬಳಿಕ ಅಲ್ಲಿಂದ ಮಾ.16ರಂದು ವೈದ್ಯಕೀಯ ಕಾಲೇಜಿ(ಮಹಾರಾಜ ಅಗ್ರಸೇನ್)ಗೆ ದಾಖಲಿಸಲಾಗಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.