ಸಿವಾನ್ (ಬಿಹಾರ) :ಪವಿತ್ರ ಮಾಸ ಸಾವನ್ (ಸಾವನ್ ಪೂಜೆ 2022) ನಡೆಯುತ್ತಿದ್ದು, ಇಂದು ಸಾವನ್‌ನ ಮೊದಲ ಸೋಮವಾರ ದುರ್ಘಟನೆ ನಡೆದಿದೆ. ಮಹೇಂದ್ರನಾಥ ದೇವಾಲಯದಲ್ಲಿ ನಡೆದ ಶಿವನ ಜಲಾಭಿಷೇಕಕ್ಕೆ ಅಪಾರ ಭಕ್ತ ಸಮೂಹ ನೆರೆದಿತ್ತು. ಈ ವೇಳೆ ದೇವಸ್ಥಾನದಲ್ಲಿ ನೀರು ಹರಿಸುವ ವೇಳೆ ಕಾಲ್ತುಳಿತ ಉಂಟಾಗಿ 3 ಮಂದಿ ಸಾವಿಗೀಡಾಗಿದ್ದಾರೆ.
ಸಾವನ್ನಪ್ಪಿದವರಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಎಂದು ತಿಳಿದುಬಂದಿದೆ. ಮತ್ತೊಬ್ಬ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ನಂತರ ಸಾಕಷ್ಟು ಗೊಂದಲ ಉಂಟಾಗಿತ್ತು. ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಒಂದಿಂಚೂ ಜಾಗವಿಲ್ಲದಷ್ಟು ಜನಸಂದಣಿ: ಮಹೇಂದ್ರನಾಥ ದೇಗುಲದಲ್ಲಿ ಬೆಳಗ್ಗೆಯಿಂದಲೇ ಭಕ್ತರ ದಂಡು ನೆರೆದಿತ್ತು. ದೇವಸ್ಥಾನದಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಜನರು ಒಬ್ಬರ ಮೇಲೆ ಒಬ್ಬರು ಬೀಳಲು ಪ್ರಾರಂಭಿಸಿದ್ದರು. ಜಲ ಅರ್ಪಿಸುವ ವೇಳೆ ನೂಕುನುಗ್ಗಲು ಉಂಟಾಗಿ ಮೂವರು ಮಹಿಳೆಯರು ಗಾಯಗೊಂಡಿದ್ದರು. ಮೂವರನ್ನೂ ಸಿವಾನ್ ಸದರ್ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಕಾಲ್ತುಳಿತದ ವೇಳೆ ಮತ್ತೊಬ್ಬರು ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಮೃತರು ಉತ್ತರಪ್ರದೇಶದ ಡಿಯೋರಿಯಾ ನಿವಾಸಿ ಎಂದು ಹೇಳಲಾಗಿದೆ. ಇದೇ ಸಮಯದಲ್ಲಿ, ಮೃತ ಮಹಿಳೆಯರನ್ನು ಹುಸೈನಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತಾಪುರ್ ನಿವಾಸಿ ಮೋತಾಬ್ ಚೌಧರಿ ಅವರ ಪತ್ನಿ ಲೀಲಾವತಿ ದೇವಿ ಮತ್ತು ಜಿರಾಡೆ ಪೊಲೀಸ್ ಠಾಣೆ ವ್ಯಾಪ್ತಿಯ ಪಥರ್ ಗ್ರಾಮದ ನಿವಾಸಿ ಸುಹಾಗ್ಮತಿ ದೇವಿ ಎಂದು ಗುರುತಿಸಲಾಗಿದೆ.