ಶಹದೋಲ್ (ಮಧ್ಯಪ್ರದೇಶ):ಶಹದೋಲ್ ಜಿಲ್ಲೆಯಲ್ಲಿ ವಿಚಿತ್ರ ಹಾಗೂ ನಿಗೂಢ ರೀತಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಸಿಕ್ಕಿದೆ. ಮಹಿಳೆಯ ತಲೆಕೂದಲುಗಳನ್ನು ಕತ್ತರಿಸಲಾಗಿದೆ. ಮೃತದೇಹದಿಂದ ಕಣ್ಣು, ಮೂಗು, ಕಿವಿ ಹಾಗು ನಾಲಿಗೆ ಕಾಣೆಯಾಗಿವೆ. ಮೃತದೇಹದ ಪ್ರಮುಖ ಅಂಗಾಂಗಳು ಕಾಣೆಯಾಗಿದ್ದರಿಂದ ಪ್ರಕರಣದ ತನಿಖೆ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ನಿಗೂಢ ಕೊಲೆ ಪ್ರಕರಣದ ಹಿಂದೆ ಬಿದ್ದಿರುವ ಪೊಲೀಸರು, ಆರೋಪಿಗಳಿಗೆ ಶೋಧ ತೀವ್ರಗೊಳಿಸಿದ್ದಾರೆ.
ಸಂಪೂರ್ಣ ವಿವರ: ಶಹದೋಲ್ ಜಿಲ್ಲೆಯ ಜೈತ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪಟಪರಿಹ ಟೋಳದ 55 ವರ್ಷದ ಜುನಿ ಬಾಯಿ ಗೊಂಡ್ ಎಂಬ ಮಹಿಳೆಯ ಮೃತದೇಹ ಇದಾಗಿದೆ. ಈ ಮಹಿಳೆ ಮನೆಯಲ್ಲಿ ಒಬ್ಬರೇ ಇರುತ್ತಿದ್ದರಂತೆ. ದುಷ್ಕರ್ಮಿಗಳು ಕಳೆದ ಎರಡು ದಿನದ ಹಿಂದೆ ಕೊಲೆಗೈದು ಪರಾರಿಯಾಗಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತದೇಹ ವಿಕಾರವಾಗಿದೆ. ಕುತ್ತಿಗೆಯ ಮೇಲಿನ ಯಾವುದೇ ಅಂಗಾಂಗಗಳು ಇಲ್ಲ. ತಲೆ ಕೂದಲು ಕತ್ತರಿಸಲಾಗಿದೆ. ಕಣ್ಣು, ಮೂಗು, ಕಿವಿ, ನಾಲಿಗೆಯಲ್ಲಿ ಕಿತ್ತು ಹಾಕಿರುವ ದುರುಳರು, ಆಕೆಯ ಮುಖದ ಮೇಲ್ಮೈ ಚರ್ಮವನ್ನೂ ಸುಲಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ತಂದೆ ಕೊಲೆಗೈದು ಹೆದ್ದಾರಿ ಪಕ್ಕ ಶವ ಹೂತಿಟ್ಟ ಮಗ; ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಪೊಲೀಸರಿಂದ ತನಿಖೆ
ಮಹಿಳೆಯ ತಲೆಭಾಗದ ಹೊರತಾಗಿ ಬೇರಾವುದೇ ಭಾಗದಲ್ಲಿ ಗಾಯದ ಗುರುತುಗಳಿಲ್ಲ. ಮನೆಯ ಮಂಚದ ಕೆಳಗೆ ಶವ ದೊರೆತಿದೆ. ಮೃತದೇಹದ ಬಳಿ ಕಿತ್ತು ಹಾಕಿದ ಹುಲ್ಲುಗಳು ಪತ್ತೆಯಾಗಿವೆ. ಪ್ರಕರಣ ಜಟಿಲವಾಗಿದ್ದದಿಂದ ಶಹದೋಲ್ ಹೆಚ್ಚುವರಿ ಎಸ್ಪಿ ಮುಖೇಶ್ ವೈಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಕೂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.