ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗ್ಯಾಂಗ್ವೊಂದು ತಾಯಿ, ಮಗಳ ಮೇಲೆ ರಾಡ್ ಹಾಗೂ ದೊಣ್ಣೆಗಳಿಂದ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ವಿಡಿಯೋ ಇದೀಗ ವೈರಲ್ ಆಗಿವೆ.
ನವದೆಹಲಿಯ ಶಾಲಿಮಾರ್ ಬಾಗ್ನಲ್ಲಿ ಈ ಘಟನೆ ನಡೆದಿದ್ದು, 38 ವರ್ಷದ ಮಹಿಳೆ ಹಾಗೂ ಅವರ ಪುತ್ರಿ ಮೇಲೆ ನಡುರಸ್ತೆಯಲ್ಲೇ ಹಲ್ಲೆ ನಡೆಸಲಾಗಿದೆ. ನವೆಂಬರ್ 19ರಂದು ಈ ಪ್ರಕರಣ ನಡೆದಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಘಟನೆ ಇದೀಗ ಬೆಳಕಿಗೆ ಬಂದಿದೆ.
ಮೂರ್ನಾಲ್ಕು ಮಂದಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈಗಾಗಲೇ ಚೇತರಿಸಿಕೊಂಡಿರುವ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾರೆ.
ಇದಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಸಿಸಿಟಿವಿ ವಿಡಿಯೋ ಕೂಡ ವೈರಲ್ ಆಗಿವೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿರಿ:ಸುಪ್ರೀಂ ತರಾಟೆ ಬೆನ್ನಲ್ಲೇ ಎಚ್ಚೆತ್ತ ದೆಹಲಿ ಸರ್ಕಾರ: ನಾಳೆಯಿಂದ ಮತ್ತೆ ಶಾಲೆಗಳು ಬಂದ್
ನವೆಂಬರ್ 19ರಂದು ಶಾಲಿಮಾರ್ ಬಾಗ್ ಪ್ರದೇಶದಲ್ಲಿ ರಾತ್ರಿ ವೇಳೆ ಕಾರ್ನಿಂದ ಕೆಳಗೆ ಇಳಿಯುತ್ತಿದ್ದಂತೆ ದೊಣ್ಣೆ ಹಾಗೂ ರಾಡ್ಗಳಿಂದ ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ. ಇದರ ಬೆನ್ನಲ್ಲೇ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಮಹಿಳೆ ಹಲ್ಲೆಯ ಹಿಂದೆ ಆಪ್ ಶಾಸಕಿ ವಂದನಾ ಕುಮಾರಿ ಕೈವಾಡವಿದೆ ಎಂದು ಆರೋಪ ಮಾಡಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿರುವ ಶಾಸಕಿ ವಂದನಾ ಕುಮಾರಿ, ಮಹಿಳೆ ಮಾಡಿರುವ ಆರೋಪದಲ್ಲಿ ಯಾವುದೇ ರೀತಿಯ ಹುರುಳಿಲ್ಲ. ಆಕೆ ನನ್ನ ಮನೆಯ ಪಕ್ಕದಲ್ಲೇ ವಾಸವಾಗಿದ್ದು, ಈ ಹಿಂದಿನಿಂದಲೂ ಇಂತಹ ಅನೇಕ ಆರೋಪ ನನ್ನ ಮೇಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.