ಲಖನೌ (ಉತ್ತರ ಪ್ರದೇಶ): ಪೊಲೀಸ್ ಕಮಿಷನರ್ ಕಚೇರಿಯಲ್ಲೇ ಮಹಿಳಾ ಕಾನ್ಸ್ಟೇಬಲ್ವೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಪ್ರಕರಣ ಉತ್ತರ ಪ್ರದೇಶ ರಾಜಧಾನಿ ಲಖನೌದಲ್ಲಿ ಬೆಳಕಿಗೆ ಬಂದಿದೆ. ರಕ್ಷಾಬಂಧನ ಹಬ್ಬದ ದಿನದಂದೇ ಹೆಡ್ ಕಾನ್ಸ್ಟೇಬಲ್ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚೆಗೆ ರಾಜಧಾನಿ ಲಖನೌಗೆ ವರ್ಗಾವಣೆಗೊಂಡಿದ್ದ ಮಹಿಳಾ ಕಾನ್ಸ್ಟೇಬಲ್ ರಕ್ಷಾಬಂಧನದ ದಿನ ತನ್ನ ಪೋಸ್ಟಿಂಗ್ಗಾಗಿ ಕಮಿಷನರ್ ಕಚೇರಿಗೆ ಆಗಮಿಸಿದ್ದರು. ಈ ವೇಳೆ, ಅಲ್ಲಿದ್ದ ಹೆಡ್ ಕಾನ್ಸ್ಟೇಬಲ್ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಲಿಖಿತ ದೂರು ಕೊಟ್ಟಿದ್ದಾರೆ. ಈ ದೂರಿನ ಆಧಾರದ ಮೇಲೆ ಉಪ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಆಂತರಿಕ ಸಮಿತಿಯು ತನಿಖೆ ನಡೆಸುತ್ತಿದೆ ಎಂದು ಜಂಟಿ ಪೊಲೀಸ್ ಕಮಿಷನರ್ (ಕ್ರೈಂ ವಿಭಾಗ) ಆಕಾಶ್ ಕುಲ್ಹಾರಿ ಮಾಹಿತಿ ನೀಡಿದರು.
ಇದನ್ನೂ ಓದಿ:ಇನ್ಸ್ಟಾಗ್ರಾಮ್ನಲ್ಲಿ ಮಹಿಳೆಯರನ್ನು ಪರಿಚಯಿಸಿಕೊಂಡು ವಂಚನೆ; ಆರೋಪಿ ಸೆರೆ
ಪ್ರಕರಣದ ವಿವರ: ಸಂತ್ರಸ್ತ ಕಾನ್ಸ್ಟೇಬಲ್ ಈ ಹಿಂದೆ ಬಾರಾಬಂಕಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅಲ್ಲಿಂದ ಲಖನೌಗೆ ವರ್ಗಾವಣೆ ಮಾಡಲಾಗಿತ್ತು. ಹೀಗಾಗಿ ಶುಕ್ರವಾರ ಅವರು ಮೆಟ್ರೋಪಾಲಿಟನ್ ಕಚೇರಿಯ ಕೊಠಡಿ ಸಂಖ್ಯೆ 57ರಲ್ಲಿ ತಮ್ಮ ಕರ್ತವ್ಯಕ್ಕೆ ಹಾಜರಾಗಲು ಬಂದಿದ್ದರು. ಈ ಸಂದರ್ಭದಲ್ಲಿ ಹೆಡ್ ಕಾನ್ಸ್ಟೇಬಲ್, ಮಹಿಳಾ ಕಾನ್ಸ್ಟೇಬಲ್ ಅನ್ನು ಕುರ್ಚಿಯ ಮೇಲೆ ಕೂರುವಂತೆ ಹೇಳಿದ್ದಾರೆ. ನಂತರ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಲು ಆರಂಭಿಸಿದ್ದರು ಎಂದು ದೂರಲಾಗಿದೆ.
ಅಷ್ಟೇ ಅಲ್ಲ, ಮಹಿಳೆಗೆ ತಾನು ಬಯಸಿದ ಪೋಸ್ಟಿಂಗ್ ನೀಡುವುದಾಗಿ ಭರವಸೆ ಕೊಟ್ಟು ಆರೋಪಿ ಹೆಡ್ ಕಾನ್ಸ್ಟೇಬಲ್ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ. ಇದರ ಬಳಿಕ ಮಹಿಳಾ ಕಾನ್ಸ್ಟೇಬಲ್ ಅಲ್ಲಿಂದ ಮೌನವಾಗಿ ಹೊರಟು ಬಂದು ಮೇಲಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ, ಘಟನೆ ಬಗ್ಗೆ ದೂರು ನೀಡಿದ್ದರೂ ಆರೋಪಿ ಹೆಡ್ ಕಾನ್ಸ್ಟೇಬಲ್ ವಿರುದ್ಧ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಮಹಿಳೆ ಕಾನ್ಸ್ಟೇಬಲ್ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ಪ್ರಜ್ಞಾಹೀನ ಸ್ಥಿತಿಯಲ್ಲಿ ಕಾನ್ಸ್ಟೇಬಲ್ ಪತ್ತೆ:ಆಗಸ್ಟ್ 29ರಂದುಮಂಕಾಪುರದಿಂದ ಅಯೋಧ್ಯೆಗೆ ಬರುತ್ತಿದ್ದ ಪ್ಯಾಸೆಂಜರ್ ರೈಲಿನಲ್ಲಿ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ವೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮಧ್ಯಾಹ್ನದ ಹೊತ್ತಲ್ಲೇ ರೈಲಿನ ಖಾಲಿ ಬೋಗಿಯಲ್ಲಿ ರಕ್ತದ ಮಡುವಿನಲ್ಲಿ ಅವರು ಬಿದ್ದಿದ್ದರು. ತಲೆ ಹಾಗೂ ದೇಹದ ಮೇಲೆ ಚಾಕುವಿನಂತಹ ಹರಿತವಾದ ಆಯುಧದಿಂದ ಗಾಯದ ಗುರುತುಗಳು ಕೂಡ ಇದ್ದವು. ಈ ವಿಷಯ ತಿಳಿದು ರೈಲ್ವೆ ಎಸ್‌ಪಿ ಪೂಜಾ ಯಾದವ್ ಹಾಗೂ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿ, ಮಹಿಳಾ ಕಾನ್ಸ್ಟೇಬಲ್ ಅನ್ನು ಆಸ್ಪತ್ರೆಗೆ ರವಾನಿಸಿದ್ದರು. ಅಲ್ಲದೇ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು.
ಇದನ್ನೂ ಓದಿ:ಮಗಳಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕನಿಗೆ ಬುದ್ಧಿವಾದ ಹೇಳಿದ ತಂದೆ ಕೊಲೆ