ಸೇಲಂ (ತಮಿಳುನಾಡು):ಮಕ್ಕಳಿಗಾಗಿ ಹೆತ್ತವರು ಎಂತಹ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ. ತಮ್ಮ ಆಸೆ, ನಿರೀಕ್ಷೆಗಳನ್ನೆಲ್ಲ ಬಚ್ಚಿಟ್ಟುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಮಹಾ ತಾಯಿ ಮಗನ ಕಾಲೇಜು ಶುಲ್ಕ ಕಟ್ಟುವ ಹಣ ಹೊಂದಿಸಲು ಪರಿಹಾರ ಸಿಗುತ್ತದೆ ಎಂದು ಚಲಿಸುತ್ತಿರುವ ಬಸ್ ಎದುರು ಬಂದು ಪ್ರಾಣ ತ್ಯಾಗ ಮಾಡಿದ್ದಾರೆ.ತನ್ನ ಮಗನ ಭವಿಷ್ಯ ಉಜ್ವಲಗೊಳಿಸುವ ಆಸೆಯಿಂದ ತಾಯಿ ತನ್ನ ಪ್ರಾಣವನ್ನೇ ಬಲಿ ಕೊಟ್ಟ ದಾರುಣ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ.ಪಾಪತಿ (46) ಮೃತ ಮಹಿಳೆ. ಕಳೆದ ಜೂ.28ರಂದು ಬೆಳಗ್ಗೆ ಈ ಘಟನೆ ನಡೆದಿದೆ.
ಸೇಲಂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕ್ಲೀನರ್ ದುಡಿಯುತ್ತಿದ್ದ ಬಡ ಮಹಿಳೆ, ಮಗನ ಭವಿಷ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಚಲಿಸುತ್ತಿದ್ದ ಬಸ್‌ಗೆ ಅಡ್ಡ ಬಂದು ಮಹಿಳೆ ಜೀವ ಕಳೆದುಕೊಂಡಿದ್ದಾರೆ. ಆರಂಭದಲ್ಲಿ ಇದು ಆತ್ಮಹತ್ಯೆ ಪ್ರಕರಣ ಎನ್ನಲಾಗಿತ್ತು. ಆದರೆ, ಆಕೆಯ ಈ ದುಡುಕಿನ ನಿರ್ಧಾರದ ಹಿಂದಿನ ಕಾರಣ ಕೇಳಿ ಜನ ಮಮ್ಮಲ ಮರುಗಿದ್ದಾರೆ. ಕಾಲೇಜಿಗೆ ಹೋಗುವ ಮಗನ ಶುಲ್ಕ ಭರಿಸಲು, ಸರ್ಕಾರದ ಪರಿಹಾರ ಸಿಗಲಿದೆ ಎಂಬ ಭರವಸೆಯಿಂದ ಆಕೆ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ ಎಂಬ ವಿಚಾರ ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಪ್ರಕರಣದ ಸಂಪೂರ್ಣ ವಿವರ: ಪಾಪತಿ ಸೇಲಂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ವಚ್ಛತಾ ಕೆಲಸಗಾರ್ತಿಯಾಗಿ ಕೆಲಸ ಮಾಡುತ್ತಿದ್ದರು. ಆಕೆ ಪತಿಯನ್ನು ಕಳೆದುಕೊಂಡಿದ್ದು, ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ. ಕಳೆದ ತಿಂಗಳು (ಜೂ. 28) ಬೆಳಗ್ಗೆ ಸೇಲಂ ಕಾರ್ಪೊರೇಷನ್ ವ್ಯಾಪ್ತಿಯ ಅಗ್ರಹಾರಂ ಪ್ರದೇಶದಲ್ಲಿ ಖಾಸಗಿ ಬಸ್ ಡಿಕ್ಕಿ ಹೊಡೆದು ಪಾಪತಿ ಮೃತಪಟ್ಟಿದ್ದರು.
ತನಿಖೆಯಿಂದ ಬಯಲಾದ ಸತ್ಯ:ಅಪಘಾತದ ಕುರಿತು ಸೇಲಂ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಅಪಘಾತ ನಡೆದ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಆ ವೇಳೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ(ಪಾಪತಿ) ಏಕಾಏಕಿ ಅಡ್ಡ ಬಂದು ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದ ದೃಶ್ಯಗಳು ಸೆರೆಯಾಗಿವೆ. ಇದರಿಂದ ಆಕೆ ಉದ್ದೇಶ ಪೂರ್ವಕವಾಗಿಯೇ ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.