ಗುಂಟೂರು (ಆಂಧ್ರಪ್ರದೇಶ): ಮದುವೆಯ ಸಂದರ್ಭದಲ್ಲಿ ವಧುವಿನ ಕಡೆಯಿಂದ ವರದಕ್ಷಿಣೆ ಪಡೆಯುವುದು ಭಾರತೀಯ ಕಾನೂನಿನ್ವಯ ಶಿಕ್ಷಾರ್ಹ ಅಪರಾಧ. ಹೀಗಿದ್ದರೂ ಅಲ್ಲಲ್ಲಿ ಗೌಪ್ಯವಾಗಿ ವರದಕ್ಷಿಣೆ ತೆಗೆದುಕೊಳ್ಳುವ ಅನೇಕ ಪ್ರಕರಣಗಳು ನಡೆಯುತ್ತಿರುತ್ತವೆ. ಗಂಡನ ಕಡೆಯವರು ದುಡ್ಡಿಗಾಗಿ ಪೀಡಿಸುವ ಅನೇಕ ಪ್ರಕರಣಗಳನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಯುವಕ ತಂದೆ ಇಲ್ಲದ ಹುಡುಗಿಯನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಮದುವೆಯಾಗಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹೀಗಾಗಿ ತನಗೆ ನ್ಯಾಯ ಕೊಡಿಸಬೇಕೆಂದು ಹೆಂಡ್ತಿ ವಿರುದ್ಧ ಪೊಲೀಸರು ಮೊರೆ ಹೋಗಿದ್ದಾನೆ.
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಬಿ.ಟೆಕ್ ಮುಗಿಸಿರುವ ಶ್ರೀನಿವಾಸರಾವ್ ಎಂಬಾತ ಮೋಟಾರ್ ಕಂಟ್ರೋಲರ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾನೆ. ಇದೇ ಫೆಬ್ರವರಿಯಲ್ಲಿ ಯುವತಿಯೊಬ್ಬಳನ್ನು ಮದುವೆಯಾಗಿದ್ದ. ಆಕೆಗಾಗಿ 2 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನೂ ಮಾಡಿಸಿ, ಆಕೆಯ ಇಚ್ಛೆಯಂತೆಯೇ ಬೇರೆ ಮನೆ ಕೂಡ ಮಾಡಿದ್ದಾನೆ. ಆದರೆ, ಇಲ್ಲಿಯವರೆಗೂ ಆಕೆ ಗಂಡನ ಮನೆಗೆ ಬಂದಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಗಂಡನ ವಿರುದ್ಧವೇ ಪೊಲೀಸರಿಗೆ ದೂರು ಕೊಟ್ಟಿದ್ದಾಳೆ. ಇದೀಗ ಇದಕ್ಕೆ ಪ್ರತಿಯಾಗಿ ಗಂಡ ಶ್ರೀನಿವಾಸರಾವ್ ಕೂಡ ದೂರು ನೀಡಿದ್ದಾನೆ.
ಶ್ರೀನಿವಾಸರಾವ್ ಹೇಳುವುದೇನು?: ಶ್ರೀನಿವಾಸರಾವ್ನ ತಂದೆ ಪೋಲಿಯೊದಿಂದ ಬಳಲುತ್ತಿದ್ದು, ತಾಯಿಯೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಒಬ್ಬನೇ ಮಗನಾಗಿರುವ ಈತನಿಗೆ ಪರಿಚಯಸ್ಥರೊಬ್ಬರ ಮೂಲಕ ಮದುವೆ ಪ್ರಸ್ತಾವ ಬಂದಿತ್ತು. ಈ ವೇಳೆ ಯುವತಿಗೆ ತಂದೆ ಇಲ್ಲ. ಹಾಗಾಗಿ, ವರದಕ್ಷಿಣೆ ನೀಡಲು ಸಾಧ್ಯವಿಲ್ಲ ಎಂದು ಆಕೆಯ ತಾಯಿ ಹೇಳಿದ್ದರು. ಇದಕ್ಕೆ ಒಪ್ಪಿಕೊಂಡು ಆಕೆಗೆ 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮಾಡಿಸಿಕೊಟ್ಟು ಮದುವೆ ಮಾಡಿಕೊಂಡಿದ್ದೇನೆ ಎಂದು ಶ್ರೀನಿವಾಸರಾವ್ ಹೇಳಿದ್ದಾನೆ.