ಕರ್ನಾಟಕ

karnataka

ETV Bharat / bharat

ಪುರುಷ ತನ್ನ ಪತ್ನಿಯ ಜೊತೆ ಸಹಬಾಳ್ವೆ ಮಾಡಲು ಒತ್ತಡ ಹೇರುವಂತಿಲ್ಲ: ಗುಜರಾತ್ ಹೈಕೋರ್ಟ್

ಪತ್ನಿಯು ವೈವಾಹಿಕ ಜೀವನವನ್ನು ಇಷ್ಟಪಡದೇ ಹೋದಲ್ಲಿ ಆಕೆಗೆ ಬಲವಂತ ಮಾಡುವ ಅಧಿಕಾರ ಪುರುಷನಿಗೆ ಇರುವುದಿಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ.

Gujarat HC
Gujarat HC

By

Published : Dec 31, 2021, 10:37 AM IST

ನವದೆಹಲಿ: ಪುರುಷನು ತನ್ನ ಪತ್ನಿಯ ಜೊತೆ ಸಹಬಾಳ್ವೆ ಮಾಡಲು ಹಾಗೂ ವೈವಾಹಿಕ ಹಕ್ಕುಗಳನ್ನು ಸ್ಥಾಪಿಸಲು ಯಾವುದೇ ರೀತಿಯ ಒತ್ತಡ ಹೇರುವಂತಿಲ್ಲ ಎಂದು ಗುಜರಾತ್​ ಹೈಕೋರ್ಟ್​ ಮಹತ್ವದ ಆದೇಶ ನೀಡಿದೆ.

ಪತ್ನಿಯು ವೈವಾಹಿಕ ಜೀವನವನ್ನು ಇಷ್ಟಪಡದೇ ಹೋದಲ್ಲಿ ಆಕೆಗೆ ಬಲವಂತ ಮಾಡುವ ಅಧಿಕಾರ ಪುರುಷನಿಗೆ ಇರೋದಿಲ್ಲ ಎಂದು ಕೋರ್ಟ್ ಹೇಳಿದೆ.

ಮುಸ್ಲಿಂ ಕಾನೂನಿನಲ್ಲಿ ಪತಿಯು ಎರಡನೇ ಮದುವೆಯಾದರೆ ಮಹಿಳೆ ಆತನ ಜೊತೆ ಜೀವನ ಸಾಗಿಸುವುದನ್ನು ನಿರಾಕರಿಸಬಹುದು. ಮುಸ್ಲಿಂ ಕಾನೂನು ಬಹುಪತ್ನಿತ್ವವನ್ನು ಒಪ್ಪುತ್ತದೆಯಾದರೂ ಅದನ್ನು ಪ್ರೋತ್ಸಾಹಿಸುವುದಿಲ್ಲ. ಹಾಗೆಯೇ, ವೈಯಕ್ತಿಯ ವಿಚಾರಕ್ಕೆ ಸಂಬಂಧಿಸಿದಂತೆ ಹೆಂಡತಿಯನ್ನು ಒತ್ತಾಯಿಸುವ ಯಾವುದೇ ಮೂಲಭೂತ ಹಕ್ಕನ್ನು ಪತಿಗೆ ನೀಡಿಲ್ಲ ಎಂದು ಕೋರ್ಟ್ ತಿಳಿಸಿದೆ. ಜೊತೆಗೆ, ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಸಂವಿಧಾನದಲ್ಲಿ ಕೇವಲ ಭರವಸೆಯಾಗಿ ಉಳಿಯಬಾರದು ಎಂದು ಹೇಳಿದ ದೆಹಲಿ ಹೈಕೋರ್ಟ್‌ನ ಇತ್ತೀಚಿನ ಆದೇಶವನ್ನು ಗುಜರಾತ್ ಹೈಕೋರ್ಟ್ ಉಲ್ಲೇಖಿಸಿದೆ.

ಬನಸ್ಕಾಂತದ ದಂಪತಿಗೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ಗುಜರಾತ್​ ಹೈಕೋರ್ಟ್ ಈ ಮಹತ್ವದ ಆದೇಶವನ್ನು ಪ್ರಕಟಿಸಿತು. ಈ ದಂಪತಿಯು 2010 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಓರ್ವ ಪುತ್ರ ಕೂಡ ಇದ್ದಾನೆ. ವೃತ್ತಿಯಲ್ಲಿ ನರ್ಸ್ ಆಗಿದ್ದ ಪತ್ನಿಯು ಪತಿಯ ಮನೆಯನ್ನು ತೊರೆದು ತವರು ಮನೆಯಲ್ಲಿ ವಾಸವಿದ್ದಳು ಎನ್ನಲಾಗಿದೆ.

ಮಹಿಳೆ ಗಂಡನ ಮನೆಯವರ ಕಿರಿಕಿರಿಗೆ ಮನನೊಂದು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ನನಗೆ ಪತಿ ಮನೆಯವರು ಕಿರುಕುಳ ನೀಡಿದ್ದಾರೆ. ಆಸ್ಟ್ರೇಲಿಯಾಗೆ ತೆರಳುವಂತೆ ಹಾಗೂ ಬಳಿಕ ಪತಿಯನ್ನೂ ಅಲ್ಲಿಗೆ ಕರೆಯಿಸಿಕೊಳ್ಳುವಂತೆ ಹಿಂಸೆ ನೀಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೌಟುಂಬಿಕ ನ್ಯಾಯಾಲಯ ಪತಿಯೊಂದಿಗೆ ವಾಸಿಸುವಂತೆ ಮಹಿಳೆಗೆ ತಿಳಿಸಿತ್ತು.

ಕೌಟುಂಬಿಕ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಮಹಿಳೆಯು ಗುಜರಾತ್​ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಲ್ಲಿ ಅರ್ಜಿ ವಿಚಾರಣೆ ನಡೆಸಿದ ಜೆ.ಬಿ.ಪರ್ದಿವಾಲಾ ಹಾಗೂ ನಿರಾಲ್ ಮೆಹ್ತಾ ಅವರಿದ್ದ ನ್ಯಾಯಪೀಠವು, ವಿವಾಹವು ಒಂದು ನಾಗರಿಕ ಒಪ್ಪಂದವಾಗಿದೆ. ವೈವಾಹಿಕ ಹಕ್ಕನ್ನು ಮರುಸ್ಥಾಪಿಸುವುದು ಮೂಲಭೂತ ಹಕ್ಕಿನ ವಿರುದ್ಧವಾಗಿದೆ ಎಂದು ಹೇಳಿ, ಪುರುಷನು ತನ್ನ ಪತ್ನಿಯ ಜೊತೆ ಸಹಬಾಳ್ವೆ ಮಾಡಲು ಹಾಗೂ ವೈವಾಹಿಕ ಹಕ್ಕುಗಳನ್ನು ಸ್ಥಾಪಿಸಲು ಯಾವುದೇ ರೀತಿಯ ಒತ್ತಡ ಹೇರುವಂತಿಲ್ಲ ಎಂದು ಆದೇಶ ಹೊರಡಿಸಿದೆ.

ABOUT THE AUTHOR

...view details