ಉತ್ತರಪ್ರದೇಶ :ಗೊರಖ್‌ಪುರ-ಪಡ್ರೌನಾ ನಡುವೆ ಸಂಚರಿಸುವ ಸರ್ಕಾರಿ ಬಸ್ವೊಂದರಲ್ಲಿ ಪ್ರತಿದಿನ ಮಹಿಳಾ ಕಂಡಕ್ಟರ್‌ವೊಬ್ಬರು ತಮ್ಮ 5 ತಿಂಗಳ ಹಸುಗೂಸನ್ನು ಕಂಕುಳಲ್ಲಿ ಎತ್ತಿಕೊಂಡೆ ಪ್ರಯಾಣಿಕರಿಗೆ ಟಿಕೆಟ್ ನೀಡುತ್ತಾರೆ.
ಶಿಪ್ರಾ ದೀಕ್ಷಿತ್ ಎಂಬ ಮಹಿಳಾ ಕಂಡಕ್ಟರ್ ಐದು ತಿಂಗಳ ಮಗು ಜೊತೆಯಲ್ಲಿಟ್ಟಕೊಂಡೇ ಕರ್ತವ್ಯ ನಿರ್ವಹಿಸ್ತಿದ್ದಾರೆ. ಇವರ ಈ ಸ್ಥಿತಿ ಕಂಡು ಸಾರಿಗೆ ಇಲಾಖೆಯ ಯಾವ ಅಧಿಕಾರಿಗೂ ಕಿಂಚಿತ್ತೂ ಅನುಕಂಪ ಬಂದಂತಿಲ್ಲ. ಮಾತೃತ್ವ ರಜೆ ಮುಗಿದ ಬಳಿಕ ಕಚೇರಿ ಕಾರ್ಯಕ್ಕೆ ನಿಯೋಜಿಸುವಂತೆ ಅವರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಮಗುವನ್ನು ಎತ್ತಿಕೊಂಡೆ ಕಾರ್ಯನಿರ್ವಹಿಸುವ ಮಹಿಳಾ ಕಂಡಕ್ಟರ್ ಆದರೆ, ಇದಕ್ಕೆ ಅನುಮತಿ ನೀಡದ ಮೇಲಾಧಿಕಾರಿಗಳು ಪುನಃ ಅವರನ್ನು ಬಸ್ ನಿರ್ವಾಹಕಿ ಕೆಲಸಕ್ಕೆ ನಿಯೋಜಿಸಿದ್ದಾರೆ ಎಂದು ಶಿಪ್ರಾ ಆರೋಪಿಸುತ್ತಿದ್ದಾರೆ. ಎಂಎಸ್ಸಿ ಟಾಪರ್ ಆಗಿದ್ರೂ ಕೂಡ ಇವರಿಗೆ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ದೊರೆತಿಲ್ಲ. ಇನ್ನು, ಕಂಡಕ್ಟರ್ ಆಗಿ ಉತ್ತಮವಾಗೇ ಕಾರ್ಯ ನಿರ್ವಹಿಸುತ್ತಿದ್ರೂ ಅಧಿಕಾರಿಗಳು ನಾನಾ ರೀತಿಯ ಕಿರುಕುಳ ನೀಡುತ್ತಿದ್ದಾರೆ.
ಕರ್ತವ್ಯಕ್ಕೆ ಹಾಜರಾಗಿದ್ರೂ ಗೈರು ಎಂದು ನಮೂದಿಸಿ, ಸಂಬಳ ಕಡಿತಗೊಳಿಸಲಾಗ್ತಿದೆ ಎಂದು ಶಿಪ್ರಾ ದೂರಿದ್ದಾರೆ. ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಗೊರಖ್‌ಪುರ ಸಾರಿಗೆ ನಿಗಮದ ಸಹಾಯಕ ಪ್ರಾದೇಶಿಕ ವ್ಯವಸ್ಥಾಪಕ ಕೆ.ಕೆ ತಿವಾರಿ ಅವರು, ಶಿಪ್ರಾಗೆ ಈಗಾಗಲೇ ಆರು ತಿಂಗಳ ಹೆರಿಗೆ ರಜೆ ನೀಡಲಾಗಿದೆ.
ಆದರೆ, ಸಾರಿಗೆ ಇಲಾಖೆಯಲ್ಲಿ ಮಕ್ಕಳ ಆರೈಕೆಗೆಂದು ಯಾವುದೇ ಅವಕಾಶವಿಲ್ಲ. ಇಲಾಖೆಯಲ್ಲಿ ಕೆಲವು ಸಮಸ್ಯೆಗಳಿರುವ ಕಾರಣ ಅವರು ಮನವಿ ಮಾಡಿದ್ದ ಅರ್ಜಿಯನ್ನು ಮುಂದಕ್ಕೆ ಹಾಕಲಾಗಿದೆ ಎಂದು ಹೇಳಿದ್ರು.