ಗುವಾಹಟಿ(ಅಸ್ಸೋಂ): ದೆಹಲಿಯ ಶ್ರದ್ಧಾ ವಾಕರ್ ಹಾಗೂ ನಿಕ್ಕಿ ಯಾದವ್ ಹತ್ಯೆ ಪ್ರಕರಣಗಳು ಮಾಸುವ ಮುನ್ನವೇ ಗುವಾಹಟಿ ನಗರದಲ್ಲಿ ಮತ್ತೊಂದು ಕ್ರೂರ ಘಟನೆ ಬೆಳಕಿಗೆ ಬಂದಿದೆ. ಆದರೆ ಇಲ್ಲಿ ಹತ್ಯೆಯ ಆರೋಪಿ ಪ್ರಿಯಕರನಲ್ಲ. ಬದಲಿಗೆ ಪತ್ನಿಯೇ ಪತಿ ಹಾಗೂ ಅತ್ತೆಯನ್ನು ಕೊಂದಿದ್ದಾಳೆ. ಪೊಲೀಸ್ ಮೂಲಗಳ ಪ್ರಕಾರ, "ಮಹಿಳೆಯೊಬ್ಬಳು ಪತಿ ಹಾಗೂ ಅತ್ತೆಯನ್ನು ಕೊಂದು ನಂತರ ದೇಹದ ಭಾಗಗಳನ್ನು ತುಂಡುಗಳಾಗಿ ಕತ್ತರಿಸಿ ರೆಫ್ರಿಜರೇಟರ್‌ನಲ್ಲಿಟ್ಟಿದ್ದರು. ಬಳಿಕ ಪಾಲಿಥಿನ್ ಕವರ್ನಲ್ಲಿ ಸುತ್ತಿ ಮೇಘಾಲಯಯದ ದೌಕಿ ರಸ್ತೆಯ ಗುಡ್ಡಗಾಡು ಪ್ರದೇಶದ ಸುಮಾರು 50/60 ಅಡಿ ಆಳದ ಕಂದಕದಲ್ಲಿ ಎಸೆದಿದ್ದಾರೆ" ಎಂದು ತಿಳಿದು ಬಂದಿದೆ.
7 ತಿಂಗಳ ಬಳಿಕ ಘಟನೆ ಬೆಳಕಿಗೆ: ಅಮರಜ್ಯೋತಿ ಡೇ ಮತ್ತು ಅತ್ತೆ ಶಂಕರಿ ಡೇ ಮೃತರು. ಘಟನೆ ನಡೆದು ಏಳು ತಿಂಗಳ ಬಳಿಕ ಪೊಲೀಸರು ನಡೆಸಿದ ರಹಸ್ಯ ತನಿಖೆಯಿಂದ ಭಯಾನಕ ಹತ್ಯೆ ಬಯಲಾಗಿದೆ. ಮಾಹಿತಿಯ ಪ್ರಕಾರ, ಕೆಲವು ವರ್ಷಗಳ ಹಿಂದೆ ಗುವಾಹಟಿಯ ಎಸ್‌ಬಿಐ ಶಾಖೆಯ ಬಳಿಯ ನರೇಂಗಿ ನಿವಾಸಿ ಅಮರಜ್ಯೋತಿ ಡೇ ಎಂಬುವವರು ವಂದನಾ ಕಲಿತಾ ಎಂಬಾಕೆಯನ್ನು ವಿವಾಹವಾಗಿದ್ದರು. ಮದುವೆಯಾದ ಆರಂಭದಲ್ಲಿ ಪತಿ ಮತ್ತು ಪತ್ನಿ ಅನೋನ್ಯವಾಗಿದ್ದರು. ಬಳಿಕ ಧಂಜಿತ್ ದೇಕಾ ಎಂಬ ಯುವಕ ಪತ್ನಿ ವಂದನಾ ಜತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ವಿಚ್ಛೇದನ ಪಡೆಯಲು ನಿರ್ಧರಿಸಿದ್ದ ದಂಪತಿ:ಈ ವಿಚಾರವಾಗಿ ಪತಿ ಅಮರಜ್ಯೋತಿ ಹಾಗೂ ವಂದನಾ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಅಮರಜ್ಯೋತಿ ಅವರ ತಾಯಿ ಶಂಕರಿ ಡೇ ಅವರು ಗುವಾಹಟಿ ನಗರದ ಚಂದಮಾರಿ ಪ್ರದೇಶದಲ್ಲಿ ಐದು ಕಟ್ಟಡಗಳನ್ನು ಹೊಂದಿದ್ದರು. ಕಟ್ಟಡವೊಂದರಲ್ಲಿ ಅವರು ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಉಳಿದ ನಾಲ್ಕು ಕಟ್ಟಡಗಳನ್ನು ಬಾಡಿಗೆಗೆ ನೀಡಿದ್ದರು. ಈ ಬಾಡಿಗೆ ಹಣವನ್ನು ಅಮರಜ್ಯೋತಿ ಅವರ ಚಿಕ್ಕಪ್ಪ ಸಂಗ್ರಹಿಸಿದ್ದರು. ಇದರಿಂದ ಅವರ ಪತ್ನಿ ವಂದನಾ ಅಸಮಾಧಾನಗೊಂಡಿದ್ದರು. ಇಂತಹ ಹಲವಾರು ಕಾರಣಗಳಿಂದಾಗಿ ವಂದನಾ ಮತ್ತು ಅಮರಜ್ಯೋತಿ ವಿಚ್ಛೇದನ ಪಡೆಯಲು ನಿರ್ಧರಿಸಿದ್ದರು.
ನಾಪತ್ತೆ ದೂರು: ಏತನ್ಮಧ್ಯೆ, ವಂದನಾ ತನ್ನ ಪತಿ ಅಮರಜ್ಯೋತಿ ಮತ್ತು ಅತ್ತೆ ನಾಪತ್ತೆಯಾಗಿದ್ದಾರೆ ಎಂದು 7 ತಿಂಗಳ ಹಿಂದೆ ನೂನ್ಮತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಫ್‌ಐಆರ್ ಆಧಾರದ ಮೇಲೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ನಡೆಯುತ್ತಿರುವಾಗ, ಅಮರಜ್ಯೋತಿ ಡೇ ಅವರ ಚಿಕ್ಕಪ್ಪ ತನ್ನ ಅತ್ತೆಯ ಐದು ಖಾತೆಗಳಿಂದ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ವಂದನಾ 2ನೇ ದೂರನ್ನು ದಾಖಲಿಸಿದ್ದರು.