ಭುವನೇಶ್ವರ(ಒಡಿಶಾ):ಹನಿಟ್ರ್ಯಾಪ್ ಮೂಲಕ ಉದ್ಯಮಿಗಳನ್ನು ವಂಚಿಸುತ್ತಿದ್ದ ಕರ್ನಾಟಕ ಮೂಲದ ಮಹಿಳೆಯನ್ನು ರಾಜಸ್ಥಾನ ಪೊಲೀಸರು ಒಡಿಶಾದಲ್ಲಿ ಬಂಧಿಸಿದ್ದಾರೆ. ರಾಜಸ್ಥಾನದ ವ್ಯಕ್ತಿಯೊಬ್ಬರನ್ನು ವಿವಾಹವಾಗಿ ಹಣ ಲೂಟಿ ಮಾಡಿದ್ದ ಪ್ರಕರಣದ ತನಿಖೆಯಲ್ಲಿ ಹನಿಟ್ರ್ಯಾಪ್ ವಿಷಯ ಬಹಿರಂಗವಾಗಿದೆ. ಈಕೆಯ ವಿರುದ್ಧ ಈಗಾಗಲೇ ಮೂರು ಪ್ರಕರಣಗಳು ದಾಖಲಾಗಿವೆ.
ಪ್ರೀತಿ ದೇಸಾಯಿ(42) ಬಂಧಿತ ಆರೋಪಿ. ಎಂಜಿನಿಯರ್ ಎಂದು ಹೇಳಿಕೊಂಡು ಒಡಿಶಾದ ಭುವನೇಶ್ವರದಲ್ಲಿ ನೆಲೆಸಿದ್ದ ಈಕೆ ಕರ್ನಾಟಕ, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳ ಉದ್ಯಮಿಗಳನ್ನು ವಂಚಿಸಿದ ಆರೋಪ ಕೇಳಿಬಂದಿದೆ. ಈಕೆಯ ಬಲೆಗೆ ಬಿದ್ದ ಉದ್ಯಮಿಗಳು ಮೋಸ ಹೋಗಿದ್ದು ತನಿಖೆಯಲ್ಲಿ ಬಯಲಾಗಿದೆ.
ಸೋಷಿಯಲ್ ಮೀಡಿಯಾ ಮೂಲಕ ವಂಚನೆ:ಹನಿಟ್ರ್ಯಾಪರ್ ಪ್ರೀತಿ ದೇಸಾಯಿ ಸಾಮಾಜಿಕ ಮಾಧ್ಯಮಗಳ ಮೂಲಕ ದೊಡ್ಡ ಕುಳಗಳನ್ನು ಪರಿಚಯ ಮಾಡಿಕೊಂಡು ಬಳಿಕ ಅವರನ್ನು ಪ್ರೀತಿಯ ಬಲೆಗೆ ಬೀಳಿಸುತ್ತಿದ್ದರು. ಸ್ನೇಹ ಬೆಳೆಸಿದವರ ಜೊತೆ ಸಲುಗೆಯಿಂದ ಇರುತ್ತಿದ್ದ ಈಕೆ ಆತ್ಮೀಯ ಕ್ಷಣಗಳ ಚಿತ್ರಗಳನ್ನು ಕ್ಲಿಕ್ಕಿಸಿ ಹಣಕ್ಕೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದಳು ಎಂದು ಹೇಳಲಾಗ್ತಿದೆ.
ರಾಜಸ್ಥಾನಿಗನ ವಿವಾಹವಾಗಿ ಯಾಮಾರಿಸಿದ ಪ್ರೀತಿ:ರಾಜಸ್ಥಾನದ ಉದ್ಯಮಿಯೊಬ್ಬನನ್ನು ಈಚೆಗೆ ವಿವಾಹವಾಗಿದ್ದ ಪ್ರೀತಿ ದೇಸಾಯಿ, ಬಳಿಕ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ. ಲಕ್ಷಾಂತರ ರೂಪಾಯಿ ಹಣವನ್ನು ಆತನಿಂದ ಪೀಕಿ ಅಲ್ಲಿಂದ ಪರಾರಿಯಾಗಿದ್ದಾಳೆ. ಈ ಬಗ್ಗೆ ಮೋಸ ಹೋದ ವ್ಯಕ್ತಿ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿತ್ತು.