ಗಿರಿದಿಹ್, ಬಾಗೋದರ್(ಜಾರ್ಖಂಡ್): ಮಹಿಳೆಯನ್ನು ಥಳಿಸಿ, ಬಟ್ಟೆ ಹರಿದು ರಾತ್ರಿಯಿಡಿ ನಿರ್ಜನ ಪ್ರದೇಶದಲ್ಲಿ ಮರಕ್ಕೆ ಕಟ್ಟಿಹಾಕಿರುವ ಪ್ರಕರಣ ಜಾರ್ಖಂಡ್ ರಾಜ್ಯದ ಗಿರಿದಿಹ್ ಜಿಲ್ಲೆಯ ಸರಿಯಾ ಪೊಲೀಸ್ ಠಾಣೆ ವ್ಯಾಪ್ತಿ ಜರುಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಪ ಪ್ರತ್ಯಾರೋಪಗಳು ಶುರುವಾಗಿವೆ.
ಮಹಿಳೆಯನ್ನು ರಾತ್ರಿಯಿಡೀ ಮರಕ್ಕೆ ಕಟ್ಟಿಹಾಕಿರುವು ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿ, ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ಬಿಡುಗಡೆಗೊಳಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಬುಧವಾರ ರಾತ್ರಿ 11 ಗಂಟೆಗೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ
ಘಟನೆ ಬಗ್ಗೆ ಸಂತ್ರಸ್ತೆ ಹೇಳಿದ್ದೇನು?: ’’ರಾತ್ರಿ ಯಾರೋ ಮನೆ ಎದುರು ಬಂದು ಕರೆದರು. ಯಾರೋ ಏನೂ ಅಂಥ ಹೊರಗೆ ಬಂದಾಗ ಇಬ್ಬರು ಯುವಕರು ನಿಂತಿದ್ದರು. ತಕ್ಷಣ ನನ್ನನು ಎಳೆದುಕೊಂಡು ಇಬ್ಬರು ಹಿಡಿದು ಬೈಕ್ ಮೇಲೆ ಕೂಡಿಸಿದರು. ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಆಗಲಿಲ್ಲ. ಆ ವೇಳೆ ನನ್ನನ್ನು ತೀವ್ರವಾಗಿ ಹೊಡೆದರು. ನಂತರ ಒಂದು ಕಿ.ಮೀ ದೂರದ ನಿರ್ಜನ ಪ್ರದೇಶಕ್ಕೆ ತಂದು ಮತ್ತೆ ನನ್ನ ಮೇಲೆ ಹಲ್ಲೆ ನಡೆಸಿದರು. ಧರಿಸಿದ್ದ ಬಟ್ಟೆಗಳನ್ನು ಹರಿದು ಹಾಕಿದರು. ನಂತರ ಹಗ್ಗದಿಂದ ನೀಲಗಿರಿ ಮರಕ್ಕೆ ಕಟ್ಟಿ ಹಾಕಿದರು. ರಾತ್ರಿಯಿಡಿ ಮರಕ್ಕೆ ಕಟ್ಟಿದ್ದರಿಂದ ತೀವ್ರ ಭಯಗೊಂಡಿದ್ದ ನಾನು, ಅಸ್ವಸ್ಥಳಾಗಿದ್ದೆ‘‘ ಎಂದು ಸಂತ್ರೆಸ್ತೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಸದ್ಯ ಮಹಿಳೆಗೆ ಸ್ಥಳೀಯ ದೇವಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.