ದಿಂಡಿಗಲ್ಲು(ತಮಿಳುನಾಡು):ತನ್ನ ಲೈಂಗಿಕ ಆಸೆ ತೀರಿಸದ ತಮ್ಮನ ಪತ್ನಿ ಮತ್ತು ಆಕೆಯ ಒಂದು ವರ್ಷದ ಮಗಳನ್ನು ಕೊಡಲಿಯಿಂದ ಬರ್ಬರವಾಗಿ ಕೊಲೆಗೈದು ಸುಟ್ಟು ಹಾಕಿರುವ ಅಮಾನವೀಯ ಘಟನೆ ಪೆರಿಯಮಲೈಯೂರಿನ ವಲಸು ಹೊಬಳಿಯಲ್ಲಿ ನಡೆದಿದೆ. ದುಷ್ಕೃತ್ಯದ ಬಳಿಕ ಆರೋಪಿ ಹಿರಿಯ ಸಹೋದರರನ್ನು ಗ್ರಾಮಸ್ಥರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆಯ ಸಂಪೂರ್ಣ ವಿವರ:ವಲಸು ಹೋಬಳಿಯ ಶಿವಕುಮಾರ್ ಮತ್ತು ಅಂಜಲಿ (22) ಎರಡು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ಇಬ್ಬರ ಪ್ರೀತಿಗೆ ಸಾಕ್ಷಿಯೆಂಬಂತೆ ಮಲರ್ವಿಳಿ ಎಂಬ ಒಂದು ವರ್ಷದ ಮಗಳಿದ್ದಾಳೆ. ಇವರು ಅವಿಭಕ್ತ ಕುಟುಂಬದ ಇವರು ದಿನಗೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಶನಿವಾರ ಸಂಜೆ ಮೇಕೆ ಮೇಯಿಸಲು ತೆರಳಿದ್ದ ಅಂಜಲಿ ಮತ್ತು ಆಕೆಯ ಮಗಳು ವಾಪಸ್ ಮನೆಗೆ ಬಂದಿರಲಿಲ್ಲ.
ಅಂಜಲಿಯ ಮದುವೆಗೂ ಮುನ್ನ ಶಿವಕುಮಾರನ ಹಿರಿಯ ಸಹೋದರ ಎನ್.ಕರುಪ್ಪಯ್ಯ (30) ಆಕೆಯ ಮೇಲೆ ಕಣ್ಣು ಹಾಕಿದ್ದನಂತೆ. ಅನೇಕ ಬಾರಿ ಲೈಂಗಿಕ ಕಿರುಕುಳ ನೀಡಲೂ ಯತ್ನಿಸಿದ್ದಾನೆ. ಆದ್ರೆ ಅದಕ್ಕೆಲ್ಲಾ ಅಂಜಲಿ ಸೊಪ್ಪು ಹಾಕುತ್ತಿರಲಿಲ್ಲ. ಒಂದು ದಿನ ಅಂಜಲಿಯನ್ನು ಕರುಪ್ಪಯ್ಯ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿದ್ದಾನೆ. ಆದ್ರೆ ಅಂದು ಪ್ರಾಣಾಪಾಯದಿಂದ ಪಾರಾಗಿದ್ದಳು.
ಇದನ್ನೂ ಓದಿ:ಕೀವ್ ಬಳಿ 410 ನಾಗರಿಕರ ಮೃತದೇಹ ಪತ್ತೆ: 'ಜನಾಂಗೀಯ ಹತ್ಯೆ' ಎಂದ ಉಕ್ರೇನ್ ಅಧ್ಯಕ್ಷ
ಕರುಪ್ಪಯ್ಯನನ್ನು ಇಷ್ಟಪಡದ ಅಂಜಲಿ ಆತನ ಕಿರಿ ಸಹೋದರ ಶಿವಕುಮಾರನನ್ನು ಪ್ರೀತಿಸುತ್ತಿದ್ದಳು. ಕಳೆದ ಎರಡು ವರ್ಷಗಳ ಹಿಂದೆ ಅಂಜಲಿ ಹಾಗು ಶಿವಕುಮಾರ್ ಪ್ರೇಮ ವಿವಾಹವಾಗಿದ್ದರು. ಶಿವಕುಮಾರ್‌ನದ್ದು ಅವಿಭಕ್ತ ಕುಟುಂಬವಾಗಿದ್ದರಿಂದ ಎಲ್ಲರೂ ಒಂದೇ ಮನೆಯಲ್ಲಿ ಜೀವನ ಸಾಗಿಸುವ ಸ್ಥಿತಿ ಅಂಜಲಿಗೆ ಎದುರಾಗಿತ್ತು.
ಶುರುವಾಯ್ತು ಲೈಂಗಿಕ ಕಿರುಕುಳ:ದಿನಕಳೆದಂತೆ ಅಂಜಲಿಗೆ ಕರುಪ್ಪಯ್ಯ ಚಿತ್ರಹಿಂಸೆ ನೀಡಲು ಶುರು ಮಾಡಿದ್ದಾನೆ. 'ನನ್ನ ಕೋರಿಕೆ ತೀರಿಸು ಬಾ..' ಎಂದೆಲ್ಲಾ ಅಂಜಲಿಗೆ ಪದೇ ಪದೆ ಪೀಡಿಸುತ್ತಿದ್ದನಂತೆ. ಆದ್ರೆ ಸಹೋದರರ ಮಧ್ಯೆ ಜಗಳ ಆಗಬಾರದು ಎಂಬ ಉದ್ದೇಶಕ್ಕೆ ಈ ವಿಷಯವನ್ನು ಆಕೆ ಯಾರ ಬಳಿಯೂ ಹೇಳಿರಲಿಲ್ಲ.
ತಾಯಿ ಅಂಜಲಿ ಮತ್ತು ಒಂದು ವರ್ಷದ ಮಗಳು ಬರ್ಬರ ಕೊಲೆ: ಶಿವಕುಮಾರ್ ಕೆಲಸಕ್ಕೆ ತೆರಳಿದ ವೇಳೆ ಪತ್ನಿ ಅಂಜಲಿ ತನ್ನ ಒಂದು ವರ್ಷದ ಮಗಳೊಂದಿಗೆ ಕುರಿ ಮೇಯಿಸಲು ತೆರಳಿದ್ದರು. ಈ ವೇಳೆ ಕರುಪ್ಪಯ್ಯ ಆಕೆಯನ್ನು ಹಿಂಬಾಲಿಸಿದ್ದಾನೆ. ಬಳಿಕ ನಿರ್ಜನ ಪ್ರದೇಶದಲ್ಲಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ. ಮಗುವಿನೊಂದಿಗಿದ್ದ ಸಂತ್ರಸ್ತೆ ಸಹಾಯಕ್ಕಾಗಿ ಕಿರುಚಾಡಿದಾಗ ಕರುಪ್ಪಯ್ಯ ಸಿಟ್ಟಿಗೆದ್ದು ಅಂಜಲಿಯನ್ನು ಕೊಡಲಿಯಿಂದ ಕೊಂದು ಹಾಕಿದ್ದಾನೆ. ಆ ಬಳಿಕ ಮಗವನ್ನೂ ಸಹ ನಿರ್ದಯವಾಗಿ ಕೊಲೆ ಮಾಡಿದ್ದಾನೆ.
ಇದನ್ನೂ ಓದಿ:ಆರ್.ಎನ್.ನಾಯಕ ಕೊಲೆ ಕೇಸ್: ಬನ್ನಂಜೆ ರಾಜಾ ಸೇರಿ 9 ಅಪರಾಧಿಗಳಿಗೆ ಇಂದು ಶಿಕ್ಷೆ ಪ್ರಕಟ
ತಾಯಿ, ಮಗುವಿಗೆ ಬೆಂಕಿಯಿಟ್ಟ ಕ್ರೂರಿ:ಕುರಿ ಮೇಯಿಸಲು ಹೋದ ತಾಯಿ ಮಗಳು ಮನೆಗೆ ಬಾರದ ಕಾರಣ ಅಂಜಲಿ ಕುಟುಂಬಸ್ಥರು ಹುಡುಕಲು ಆರಂಭಿಸಿದ್ದಾರೆ. ಹೀಗೆ ಹುಡುಕುತ್ತಾ ಸಾಗುವಾಗ ನಿರ್ಜನ ಪ್ರದೇಶದಲ್ಲಿ ದಟ್ಟ ಹೊಗೆ ಕಂಡಿದೆ. ಕೂಡಲೇ ಅಲ್ಲಿಗೆ ತೆರಳಿ ನೋಡಿದಾಗ ಅಂಜಲಿ ಕುಟುಂಬಸ್ಥರು ದಿಗ್ಭ್ರಮೆಗೊಂಡಿದ್ದಾರೆ. ಏಕೆಂದರೆ, ಅಲ್ಲಿ ಅಂಜಲಿ ಮತ್ತು ಆಕೆಯ ಮಗುವನ್ನು ಕರುಪ್ಪಯ್ಯ ಕೊಲೆ ಮಾಡಿದಲ್ಲದೇ ಅವರಿಬ್ಬರನ್ನೂ ಸುಟ್ಟು ಹಾಕುತ್ತಿದ್ದ.
ಘಟನಾ ಸ್ಥಳದಲ್ಲೇ ದುರುಳ ಕರುಪ್ಪಯ್ಯನನ್ನು ನೋಡಿದ ಜನರು ತಡಮಾಡದೇ ಆತನನ್ನು ಕಟ್ಟಿ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಈ ಬಗ್ಗೆ ಪತಿ ಶಿವಕುಮಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಆರೋಪಿ ನಡೆದ ಘಟನೆಯನ್ನು ವಿವರಿಸಿದ್ದಾನೆ.