ವ್ಯಾಪರಕ್ಕೆಂದು ಬಂದು ಭಾರತವನ್ನು ಆಳಿದ ಬಿಳಿಯರಿಗೆ ಈ ನೆಲದ ಅಪ್ಪಟ ವೀರರು ಸಿಂಹಸ್ವಪ್ನವಾಗಿದ್ದರು. ಕ್ರಾಂತಿಯ ಕಿಚ್ಚು ದೇಶದ ಮೂಲೆ ಮೂಲೆಯಲ್ಲೂ ಹೊತ್ತಿದ ಕಾಲವದು. ಸ್ವತಂತ್ರ ಪಡೆಯಲು ಪರಂಗಿಗಳನ್ನು ತಾಯ್ನಾಡಿನಿಂದ ಹೊಡೆದೋಡಿಸಲು ಹಲವರು ಕ್ರಾಂತಿಯ ಹಾದಿ ಹಿಡಿದರೆ, ಇನ್ನೂ ಹಲವು ಹೋರಾಟಗಾರರು ಶಾಂತಿಯ ಮಂತ್ರ ಪಠಿಸಿದರು. ಇಂದಿನ ಸ್ವಾಂತಂತ್ರ್ಯ ಭಾರತಕ್ಕೆ ಬುನಾದಿ ಹಾಕಿದ ಹಲವು ಹೋರಾಟಗಾರರಲ್ಲಿ ಅಮರ್ ಚಂದ್ರ ಬಾಟಿಯಾ ಕೂಡ ಒಬ್ಬರು.
ಗ್ವಾಲಿಯರ್ ರಾಜಪ್ರಭುತ್ವದ ಖಜಾಂಚಿಯಾಗಿದ್ದರು :1857ರಲ್ಲಿ ವಸಾಹತುಶಾಹಿ ಬ್ರಿಟಿಷ್ ಸರ್ಕಾರದ ವಿರುದ್ಧ ದ್ವೇಷ ಉಕ್ಕುತ್ತಿದ್ದಾಗ, ಅವರ ವಿರುದ್ಧ ತಾವೂ ಅಸ್ತ್ರ ಎತ್ತಬೇಕು ಎಂದು ಬಾಟಿಯಾ ಅವರ ಅನೇಕ ಸಹೋದ್ಯೋಗಿಗಳು ಹೇಳುತ್ತಿದ್ದರು. ಆದರೆ, ಬ್ರಿಟಿಷರ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರ ಹಿಡಿಯುವುದು ತಮ್ಮ ಹೋರಾಟದ ಮಾರ್ಗವಲ್ಲ ಮತ್ತು ಸಮಯ ಬಂದಾಗ ಸ್ವಾತಂತ್ರ್ಯ ಹೋರಾಟಕ್ಕೆ ವಿಶೇಷ ರೀತಿ ಕೊಡುಗೆ ನೀಡುತ್ತೇನೆ ಎಂದು ಅಮರ್ ಚಂದ್ರ ಬಾಟಿಯಾ, ತಮ್ಮ ಸಹೋದ್ಯೋಗಿಗಳಿಗೆ ಹೇಳಿದ್ದರಂತೆ. ಸಿಂಧಿಯಾ ರಾಜವಂಶದಿಂದ ಆಳಲ್ಪಟ್ಟ ಗ್ವಾಲಿಯರ್ ರಾಜಪ್ರಭುತ್ವದ ಖಜಾಂಚಿಯಾಗಿದ್ದರು ಅಮರ್ ಚಂದ್ರ ಬಾಟಿಯಾ.
1793 ರಲ್ಲಿ ರಾಜಸ್ಥಾನದ ಬಿಕಾನೇರ್‌ನಲ್ಲಿ ಜನಿಸಿದ ಅಮರ್ ಚಂದ್ರ ಬಾಟಿಯಾ ಅವರು, ಬಾಲ್ಯದಿಂದಲೂ ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಬಲವಾದ ಬಯಕೆ ಹೊಂದಿದ್ದರು. ಅವರ ತಂದೆ ಬಿಕಾನೇರ್‌ನಲ್ಲಿ ಪೂರ್ವಿಕರ ವ್ಯಾಪಾರವನ್ನು ಹೊಂದಿದ್ದರು. ಆದರೆ, ಆರ್ಥಿಕ ನಷ್ಟದಿಂದಾಗಿ ಅವರ ತಂದೆ ಕುಟುಂಬದೊಂದಿಗೆ ಗ್ವಾಲಿಯರ್‌ಗೆ ತೆರಳಬೇಕಾಯಿತು.
ಬಿಕಾನೇರ್‌ನ ನಿಧಿಗಳು ರಹಸ್ಯವಾಗಿದ್ದವು:ಆಗಿನ ಗ್ವಾಲಿಯರ್ ಮಹಾರಾಜರು ಇವರ ಕುಟುಂಬಕ್ಕೆ ಆಶ್ರಯ ನೀಡಿದರು. ಅಲ್ಲಿ ತಮ್ಮ ವ್ಯವಹಾರವನ್ನು ಪುನಾರಂಭಿಸಲು ಸಲಹೆ ನೀಡಿದರು. ಹಣಕಾಸು ವ್ಯವಹಾರಗಳ ಮೇಲೆ ಅಮರ್ ಚಂದ್ರ ಅವರ ಪಾಂಡಿತ್ಯವು ಬಿಕಾನೇರ್‌ನ ಆಡಳಿತಗಾರರ ಗಮನ ಸೆಳೆಯಿತು. ಜಯಜಿರಾವ್ ಖಜಾಂಚಿಯಾಗಿ ಅಮರ್ ಚಂದ್ರ ಬಾಟಿಯಾ ಅವರನ್ನು ನೇಮಿಸಿದರು. ಬಿಕಾನೇರ್‌ನ ನಿಧಿಗಳು ರಹಸ್ಯವಾಗಿದ್ದವು. ಅದರ ಬಗ್ಗೆ ಕೆಲವೇ ಅಧಿಕಾರಿಗಳಿಗೆ ಮಾಹಿತಿ ಇತ್ತು. ಆದ್ದರಿಂದ ಅವರ ಜವಾಬ್ದಾರಿ ಹೆಚ್ಚಾಗಿತ್ತು.