ನವದೆಹಲಿ: ಕೇಂದ್ರ ಸರ್ಕಾರ ಶನಿವಾರ ಹುಲಿ ಗಣತಿ ಅಂಕಿ - ಅಂಶ ಬಿಡುಗಡೆ ಮಾಡಿದೆ. ಮಧ್ಯಪ್ರದೇಶವು ಹುಲಿ ಸಂಖ್ಯೆಯ ವಿಷಯದಲ್ಲಿ ಸರ್ವೋಚ್ಚ ಆಳ್ವಿಕೆಯನ್ನು ಮುಂದುವರೆಸಿದೆ. 785 ಹುಲಿಗಳೊಂದಿಗೆ ದೇಶದ ಅಗ್ರ ರಾಜ್ಯವಾಗಿ ಮುಂದುವರೆದಿದೆ.
ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಹುಲಿ ಗಣತಿ 2022 ರ ರಾಜ್ಯವಾರು ಅಂಕಿ- ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ಅಂಕಿ - ಅಂಶಗಳ ಪ್ರಕಾರ, ಭಾರತದಲ್ಲಿ 3167 ಹುಲಿಗಳಿವೆ. 563 ಹುಲಿಗಳನ್ನು ಹೊಂದಿರುವ ಕರ್ನಾಟಕವು ಮಧ್ಯಪ್ರದೇಶದ ನಂತರ ಎರಡನೇ ಸ್ಥಾನದಲ್ಲಿದೆ. ಉತ್ತರಾಖಂಡದಲ್ಲಿ 560 ಮತ್ತು ಮಹಾರಾಷ್ಟ್ರದಲ್ಲಿ 444 ಹುಲಿಗಳಿವೆ.
ಹುಲಿ ರಾಜ್ಯ ಸ್ಥಾನಮಾನವನ್ನು ಉಳಿಸಿಕೊಂಡ ಮಧ್ಯಪ್ರದೇಶ:ಹುಲಿ ರಾಜ್ಯ ಸ್ಥಾನಮಾನವನ್ನು ಕಾಯ್ದುಕೊಂಡಿರುವ ಮಧ್ಯಪ್ರದೇಶ ರಾಜ್ಯಕ್ಕೆ ಅರಣ್ಯ ಸಚಿವರು ಟ್ವಿಟರ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. 'ಮಧ್ಯಪ್ರದೇಶಕ್ಕೆ ಅಭಿನಂದನೆಗಳು, ಹೊಸ ಹುಲಿ ಗಣತಿ ಅಂಕಿ ಅಂಶಗಳ ಪ್ರಕಾರ 785 ಹುಲಿಗಳೊಂದಿಗೆ ಮಧ್ಯಪ್ರದೇಶವು ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯವಾಗಿ ಮುಂದುವರೆದಿದೆ' ಎಂದು ಅವರು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಇದು ಹುಲಿಗಳ ಸಂರಕ್ಷಣೆಗಾಗಿ ಮಧ್ಯಪ್ರದೇಶದ ಬದ್ಧತೆಯನ್ನು ತೋರಿಸುತ್ತದೆ. ಸ್ಥಳೀಯ ಸಮುದಾಯದ ಸಹಭಾಗಿತ್ವದೊಂದಿಗೆ ತೀವ್ರವಾದ ಸಂರಕ್ಷಣೆ ಮತ್ತು ಮೇಲ್ವಿಚಾರಣೆಯ ಮೂಲಕ ಮಾತ್ರ ಇದು ಸಾಧ್ಯವಾಗಿದೆ ಎಂದು ಹೇಳಿದರು. 2022ರ ಹುಲಿ ಗಣತಿಯ ಪ್ರಕಾರ ಭಾರತವು 3167 ಹುಲಿಗಳನ್ನು ಹೊಂದಿದೆ. ಇದು ಜಾಗತಿಕ ಸಂಖ್ಯೆಯ ಶೇಕಡಾ 75 ರಷ್ಟು ಹುಲಿಗಳನ್ನು ಹೊಂದಿದೆ.