ರಾಂಚಿ (ಜಾರ್ಖಂಡ್):ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ನಕ್ಸಲ್ವಾದಿ ದಿನೇಶ್ ಗೋಪೆಯನ್ನು ನೇಪಾಳದಲ್ಲಿ ಬಂಧಿಸಲಾಗಿದೆ. ಈತನ ತಲೆಗೆ 25 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಎನ್‌ಐಎ ಮತ್ತು ಜಾರ್ಖಂಡ್ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರಗಾಮಿ ಸಂಘಟನೆಯಾದ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ ಮುಖ್ಯಸ್ಥ ಗೋಪೆಯನ್ನು ಸೆರೆ ಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತದಲ್ಲಿ ದಿನೇಶ್ ನೇತೃತ್ವದ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾದ ಚಟುವಟಿಕೆಯ ಮೇಲೆ ತೀವ್ರ ನಿಗಾ ವಹಿಸಲಾಗಿತ್ತು. ಹೀಗಾಗಿ ಆತ ನೇಪಾಳಕ್ಕೆ ಪಲಾಯನವಾಗಿ ಅಲ್ಲಿಂದ ಸಂಘಟನೆಯನ್ನು ನಿರ್ವಹಣೆ ಮಾಡುತ್ತಿದ್ದ. ಜಾರ್ಖಂಡ್ ಪೊಲೀಸರ ಜೊತೆಗೆ ಕೇಂದ್ರ ತನಿಖಾ ಸಂಸ್ಥೆಯೂ ದಿನೇಶ್ ಪತ್ತೆಗಾಗಿ ನಿರಂತರವಾಗಿ ಪ್ರಯತ್ನ ನಡೆಸಿತ್ತು. ಇದರಿಂದ ದಿನೇಶ್ ಭಾರತದ ನೆರೆಯ ರಾಷ್ಟ್ರ ನೇಪಾಳದ ರಾಜಧಾನಿ ಆತ ಆಶ್ರಯ ಪಡೆದುಕೊಂಡಿರುದ್ದ. ಈ ಮಾಹಿತಿಯನ್ನು ಪೊಲೀಸರು ಪತ್ತೆ ಮಾಡಿದ್ದರು.
ಮಾಹಿತಿ ಖಚಿತವಾದ ನಂತರ ಜಾರ್ಖಂಡ್ ಪೊಲೀಸರು ಮತ್ತು ಎನ್‌ಐಎ ಜಂಟಿ ಕಾರ್ಯಾಚರಣೆ ನಡೆಸಲು ಸಜ್ಜಾಗಿತ್ತು. ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ರಹಸ್ಯವಾಗಿಡಲಾಗಿತ್ತು. ಭಾನುವಾರ ಬೆಳಗ್ಗೆ ದಿನೇಶ್ ಇರುವ ಸ್ಥಳವನ್ನು ಪತ್ತೆಹಚ್ಚಿದ ನಂತರ, ಎನ್ಐಎ ಮತ್ತು ಜಾರ್ಖಂಡ್ ಪೊಲೀಸರ ಜಂಟಿ ತಂಡ ಕಠ್ಮಂಡುವಿನಿಂದ ಆತನನ್ನು ಬಂಧಿಸಿದೆ.
ಪೊಲೀಸ್ ಅಧಿಕೃತ ಮೂಲಗಳ ಮಾಹಿತಿಯ ಪ್ರಕಾರ, ಬಂಧಿತ ದಿನೇಶ್ ಗೋಪೆಯನ್ನು ಕಠ್ಮಂಡುವಿನಿಂದ ದೆಹಲಿಗೆ ಕರೆತರಲಾಗುತ್ತಿದೆ. ಎನ್‌ಐಎ ಕಚೇರಿಯಲ್ಲಿ ವಿಚಾರಣೆ ನಡೆಸಿದ ನಂತರ ಆತನನ್ನು ಜಾರ್ಖಂಡ್‌ಗೆ ಕರೆದೊಯ್ಯಲಾಗುತ್ತದೆ ಎಂದು ತಿಳಿದುಬಂದಿದೆ. ಆದರೆ ಅಧಿಕೃತವಾಗಿ ಇನ್ನೂ ದೃಢಪಟ್ಟಿಲ್ಲ. ಜಾರ್ಖಂಡ್‌ನ ಖುಂತಿ, ರಾಂಚಿ, ಸಿಮ್ಡೆಗಾ, ಗುಮ್ಲಾ, ಚೈಬಾಸಾ ಮತ್ತು ಲೋಹರ್‌ದಾಗಾ ಜಿಲ್ಲೆಗಳಲ್ಲಿ ದಿನೇಶ್ ಗೋಪೆಯ ಭಯೋತ್ಪಾದನಾ ಹೆಜ್ಜೆಗಳು ಅಚ್ಚೊತ್ತಿವೆ.