ಟೋಕಿಯೋ: ಒಲಿಂಪಿಕ್ಸ್ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿರುವ ಭಾರತದ ಮಹಿಳಾ ಹಾಕಿ ತಂಡ ಸೆಮಿಫೈನಲ್ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಬರೋಬ್ಬರಿ ನಾಲ್ಕು ದಶಕಗಳ ಬಳಿಕ ಮಿಫೈನಲ್ಗೆ ಲಗ್ಗೆಯಿಟ್ಟಿರುವ ಭಾರತದ ತಂಡಕ್ಕೆ ಗಣ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಪ್ರಧಾನಿ ಮೋದಿ : ಪಿ.ವಿ ಸಿಂಧು ಕಂಚಿನ ಪದಕ ಗೆದ್ದಿದ್ದಾರೆ. ಪುರುಷ ಮತ್ತು ಮಹಿಳೆಯರ ಹಾಕಿ ತಂಡಗಳು ಕೂಡ ಒಲಿಂಪಿಕ್ಸ್ನಲ್ಲಿ ಐತಿಹಾಸಿಕ ಪ್ರಯತ್ನಗಳನ್ನು ಮಾಡಿವೆ. 130 ಕೋಟಿ ಭಾರತೀಯರು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುವ ಸಂದರ್ಭದಲ್ಲಿ ದೇಶ ಉನ್ನತ ಮಟ್ಟಕ್ಕೆ ತಲುಪುವುದರಲ್ಲಿ ಸಂಶಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮಹಿಳಾ ಹಾಕಿ ತಂಡ ಸೇರಿದಂತೆ ಒಲಿಂಪಿಕ್ಸ್ ಸಾಧಕರಿಗೆ ಅಭಿನಂದನೆ ಹೇಳಿದ್ದಾರೆ.
ಜಯಾ ಬಚ್ಚನ್ :ಭಾರತ ಮಹಿಳಾ ಹಾಕಿ ತಂಡ ಫೈನಲ್ ಪಂದ್ಯದಲ್ಲೂ ಜಯ ಗಳಿಸಲಿದೆ. ಈ ಮೂಲಕ ದೇಶಕ್ಕೆ ಗೌರವ ತಂದು ಕೊಡಲಿದೆ ಎಂದು ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಸಂಸತ್ ಬಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಿರಣ್ ರಿಜಿಜು :ಭಾರತದ ಕನಸು ನನಸಾಗುತ್ತಿದೆ. ಭಾರತೀಯ ಪುರುಷ ಮತ್ತು ಮಹಿಳಾ ಹಾಕಿ ತಂಡಗಳು ಟೋಕಿಯೋ ಒಲಿಂಪಿಕ್ಸ್ನ ಸೆಮಿ ಫೈನಲ್ ತಲುಪಿವೆ ಎಂದು ಕೇಂದ್ರ ಕಾನೂನು ಮತ್ತು ಮಾಜಿ ಕ್ರೀಡಾ ಸಚಿವ ಕಿರಣ್ ರಿಜಿಜು ಸಂತಸ ವ್ಯಕ್ತಪಡಿಸಿದ್ದಾರೆ.