ಮುಂಬೈ:ಸೂಪರ್‌ಮಾರ್ಕೆಟ್‌ಗಳು, ವಾಕ್-ಇನ್ ಸ್ಟೋರ್‌ಗಳು ಮತ್ತು 1,000 ಚದರ ಅಡಿಗಿಂತ ದೊಡ್ಡದಾಗಿರುವ ಜನರಲ್ ಸ್ಟೋರ್ಗಳಲ್ಲೂ ಕೂಡ ವೈನ್ ಮಾರಾಟಕ್ಕೆ ಮಹಾರಾಷ್ಟ ಸರ್ಕಾರ ಅನುಮತಿ ನೀಡಿದೆ. ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವ ನವಾಬ್ ಮಲಿಕ್, ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮದ್ಯದಂಗಡಿಗಳ ಮೂಲಕ ಮಾತ್ರ ವೈನ್ ಮಾರಾಟಕ್ಕೆ ಅವಕಾಶ ನೀಡುವ ಸದ್ಯದ ವೈನ್ ನೀತಿಯು ಕಳೆದ 20 ವರ್ಷಗಳಿಂದ ಜಾರಿಯಲ್ಲಿದೆ. ಆದರೀಗ ನಮ್ಮ ಸರ್ಕಾರವು ಪರಿಷ್ಕೃತ ನೀತಿಯನ್ನು ಜಾರಿಗೆ ತಂದಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ ಸರ್ಕಾರವು ರಾಜ್ಯದ ಕೃಷಿ ಉತ್ಪನ್ನ ಮತ್ತು ರೈತರ ಹಣ್ಣುಗಳಿಗೆ ನ್ಯಾಯಯುತ ಬೆಲೆ ಸಿಗುವಂತಹ ನಿರ್ಧಾರ ತೆಗೆದುಕೊಂಡಿದೆ. ಹಣ್ಣಿನಿಂದ ವೈನ್ ತಯಾರಿಸುವುದರಿಂದ ರೈತರಿಗೆ ಹೆಚ್ಚಿನ ದರ ಸಿಗಲಿದೆ. ಕಳೆದ ಕೆಲವು ವರ್ಷಗಳಿಂದ ಇದು ಗಮನಕ್ಕೆ ಬಂದಿರುವುದರಿಂದ ರಾಜ್ಯದ ಸೂಪರ್ ಮಾರ್ಕೆಟ್ಗಳಲ್ಲೂ ವೈನ್ ಮಾರಾಟ ಆರಂಭಿಸಲು ನಿರ್ಧರಿಸಲಾಗಿದೆ. ಇದರಿಂದ ಸರ್ಕಾರಕ್ಕೂ ಹೆಚ್ಚಿನ ಆದಾಯ ಸಿಗಲಿದೆ ಎಂದಿದ್ದಾರೆ.