ನವದೆಹಲಿ:ಭಾನುವಾರ ಅಹಮದಾಬಾದ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ನಿರಾಶಾದಾಯಕ ಸೋಲು ಕಂಡಿತು. ಈ ಸೋಲಿನ ಬಳಿಕ ಬ್ಲೂ ಬಾಯ್ಸ್ಗೆ ಭಾರತೀಯರ ಪ್ರೀತಿ, ಪ್ರೋತ್ಸಾಹ ಕಡಿಮೆಯಾಗಿಲ್ಲ. ಎಲ್ಲೆಡೆ ಭಾರತದ ಸೋಲಿಗಿಂತಲೂ ಇಲ್ಲಿವರೆಗಿನ ತಂಡದ ಶ್ರಮ, ಉತ್ತಮ ಪ್ರದರ್ಶನ ಬಗ್ಗೆ ಗುಣಗಾನ, ಅಭಿನಂದನೆಗಳು ಹರಿದುಬರುತ್ತಿವೆ. ಇದರಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಂ ಇಂಡಿಯಾ ಸದಸ್ಯರಿಗೆ ಧೈರ್ಯ ಹೇಳಿದ್ದಾರೆ.
'ಗೆಲುವು ಅಥವಾ ಸೋಲು. ನಾವು ನಿಮ್ಮನ್ನು ಒಂದೇ ರೀತಿ ಪ್ರೀತಿಸುತ್ತೇವೆ. ನಾವು ಮುಂದಿನ ಸಲ ಗೆಲ್ಲುತ್ತೇವೆ. ನೀವು ಪಂದ್ಯಾವಳಿಯಲ್ಲಿ ಉತ್ತಮವಾಗಿ ಆಡಿದ್ದೀರಿ'ಎಂದು ಸೋಲಿನ ನೋವಲ್ಲಿರುವ ಭಾರತ ತಂಡದೊಂದಿಗೆ ನಾವಿದ್ದೇವೆ ಎಂದು ರಾಹುಲ್ ಗಾಂಧಿ ಧೈರ್ಯ ತುಂಬಿದ್ದಾರೆ.
ಇದೇ ವೇಳೆ, ವಿಶ್ವಕಪ್ ಜಯಿಸಿದ ಆಸ್ಟ್ರೇಲಿಯಾ ತಂಡವನ್ನು ರಾಹುಲ್ ಅಭಿನಂದಿಸಿದ್ದಾರೆ. ಅರ್ಹ ವಿಶ್ವಕಪ್ ಗೆಲುವಿಗಾಗಿ ಅಭಿನಂದನೆಗಳು ಎಂದಿದ್ದಾರೆ.
ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿ, ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆಗಳನ್ನು ಎಕ್ಸ್ ಪೋಸ್ಟ್ನ ಮೂಲಕ ತಿಳಿಸಿದ್ದಾರೆ. ಭಾರತ ತಂಡ ಉತ್ತಮವಾಗಿ ಆಡಿದ್ದು, ಹೃದಯಗಳನ್ನು ಗೆದ್ದಿದೆ. ನಿಮ್ಮ ಪ್ರತಿಭೆ ಆಟದಲ್ಲಿ ಗೋಚರಿಸಿದೆ. ವಿಶ್ವಕಪ್‌ನುದ್ದಕ್ಕೂ ಗಮನಾರ್ಹ ಪ್ರದರ್ಶನದ ಬಗ್ಗೆ ಪ್ರತಿಯೊಬ್ಬ ಭಾರತೀಯರು ಹೆಮ್ಮೆಪಡುತ್ತಾರೆ. ನಾವು ಯಾವಾಗಲೂ ನಿಮ್ಮನ್ನು ಹುರಿದುಂಬಿಸುತ್ತೇವೆ ಮತ್ತು ನಿಮ್ಮ ಸಾಧನೆಗಳನ್ನು ಗೌರವಿಸುತ್ತೇವೆ' ಎಂದಿದ್ದಾರೆ.
ನಮ್ಮ ತಂಡದ ಜೊತೆ ನಿಲ್ಲೋಣ -ಸಿಎಂ:ಸಿಎಂ ಸಿದ್ದರಾಮಯ್ಯ ಅವರು, ನಮ್ಮ ತಂಡದೊಂದಿಗೆ ಇರೋಣ ಎಂಬ ಸಂದೇಶ ನೀಡಿದ್ದಾರೆ. ಇದೇ ವೇಳೆ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಇಡೀ ಪಂದ್ಯಾವಳಿಯಲ್ಲಿ ಭಾರತ ತೋರಿದ ಸಂಘಟಿತ ಪ್ರದರ್ಶನ, ಫೈನಲ್ ಪಂದ್ಯದವರೆಗಿನ ಅಜೇಯ ಅಭಿಯಾನ ಬಹುಕಾಲ ನೆನಪಲ್ಲಿ ಉಳಿಯಲಿದೆ ಎಂದಿದ್ದಾರೆ. ಸೋಲು - ಗೆಲುವು ಆಟದ ಅವಿಭಾಜ್ಯ ಅಂಗ. ಸೋಲಿನ ದುಃಖದಲ್ಲಿರುವ ನಮ್ಮ ತಂಡದ ಜೊತೆ ನಿಲ್ಲೋಣ ಎಂದು ಧೈರ್ಯ ತುಂಬಿದ್ದಾರೆ.
ಇದನ್ನೂ ಓದಿ:'ನಾವು ಯಾವಾಗಲೂ ನಿಮ್ಮೊಂದಿಗಿರುತ್ತೇವೆ': ವಿಶ್ವಕಪ್ ಸೋಲಿನ ಬಳಿಕ ಭಾರತ ಕ್ರಿಕೆಟ್ ತಂಡಕ್ಕೆ ಮೋದಿ ಸಂದೇಶ