ನವದೆಹಲಿ:ಒಡಿಶಾದಲ್ಲಿ ವಕೀಲರ ಧರಣಿ ಹಿಂಸಾಚಾರಕ್ಕೆ ತಿರುಗಿ ಕೆಲವು ಜಿಲ್ಲೆಗಳಲ್ಲಿ ನ್ಯಾಯಾಲಯಗಳ ಧ್ವಂಸ ಮತ್ತು ಅದರ ಕಲಾಪಗಳಿಗೆ ಅಡ್ಡಿಪಡಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ಗರಂ ಆಗಿದೆ. ನಿಮ್ಮಿಂದ ಇದನ್ನು ತಡೆಯಲಾಗದಿದ್ದರೆ, ನಾವೇ ಅಲ್ಲಿಗೆ ಅರೆಸೇನಾ ಪಡೆಗಳನ್ನು ಕಳುಹಿಸುತ್ತೇವೆ ಎಂದು ಮೌಖಿಕವಾಗಿ ಎಚ್ಚರಿಕೆ ನೀಡಿದೆ.
ಕಾನೂನು ಸುವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅಭಯ್ ಎಸ್ ಓಕಾ ಅವರಿದ್ದ ಪೀಠ, ಒಡಿಶಾದ ಪೊಲೀಸ್ ಮಹಾನಿರ್ದೇಶಕರಿಗೆ ಪಾಠ ಮಾಡಿದೆ. ಪರಿಸ್ಥಿತಿಯನ್ನು ನಿಯಂತ್ರಿಸುವುದು ಪೊಲೀಸರ ಆದ್ಯ ಕರ್ತವ್ಯ. ಅದನ್ನು ಮಾಡಲು ಸಾಧ್ಯವಾಗದಿದ್ದಲ್ಲಿ ಆ ಜಾಗಕ್ಕೆ ನ್ಯಾಯಾಲಯವು ಅರೆಸೇನಾ ಪಡೆಗಳನ್ನು ನಿಯೋಜಿಸುತ್ತದೆ ಎಂದು ಖಡಕ್ ವಾರ್ನಿಂಗ್ ನೀಡಿತು.
ಸಂಬಲ್‌ಪುರ ಜಿಲ್ಲಾ ವಕೀಲರ ಸಂಘದ 43 ಸದಸ್ಯರು ವಿವಿಧ ಬೇಡಿಕೆಗಳಿಗಾಗಿ ಧರಣಿ ನಡೆಸುತ್ತಿದ್ದಾರೆ. ಧರಣಿಗೆ ಸ್ಪಂದಿಸದ ಕಾರಣ ವಿಧ್ವಂಸಕ ಕೃತ್ಯದಲ್ಲಿ ತೊಡಗಿಸಿಕೊಂಡು, ವಿವಿಧ ಜಿಲ್ಲೆಗಳಲ್ಲಿ ಕೋರ್ಟ್ಗೆ ನುಗ್ಗಿ ವಿಚಾರಣೆಗಳಿಗೆ ಅಡ್ಡಿ ಉಂಟು ಮಾಡಿದ್ದಲ್ಲದೇ, ಅಲ್ಲಿನ ವಸ್ತುಗಳನ್ನು ಧ್ವಂಸ ಮಾಡಿ ದಾಂಧಲೆ ಎಬ್ಬಿಸಿದ್ದರು. ಇದರ ವಿರುದ್ಧ ಸುಪ್ರೀಂ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ವಿಚಾರಣೆಗೆ ಅಡ್ಡಿಪಡಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದೆ.