ನವದೆಹಲಿ:ದೇಶದಲ್ಲಿ ವ್ಯಾಪಕವಾಗಿ ಕೋವಿಡ್ ವ್ಯಾಪಿಸುತ್ತಿರುವ ಹಿನ್ನೆಲೆ, ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಅನುಕೂಲ ಮಾಡಿಕೊಡುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ.
ರಾಜಧಾನಿ ದೆಹಲಿ, ಉತ್ತರ ಪ್ರದೇಶ ಮತ್ತು ಹರಿಯಾಣಗಳಲ್ಲಿರುವ ಕಾರ್ಮಿಕರು ಸ್ವಗ್ರಾಮಗಳಿಗೆ ಹಿಂದಿರುಗುವ ವೇಳೆ, ಖಾಸಗಿ ಬಸ್ಗಳಲ್ಲಿ ಹೆಚ್ಚಿನ ಹಣ ವಸೂಲಿ ಮಾಡದಂತೆ ಅಧಿಕಾರಿಗಳು ನಿಗಾ ವಹಿಸಬೇಕು. ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲ್ವೆ ಸೌಲಭ್ಯಗಳನ್ನು ಕೇಂದ್ರಸರ್ಕಾರ ಒದಗಿಸಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಲಾಕ್ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು ಊರುಗಳಿಗೆ ತೆರಳುವ ವಿಚಾರ ಕುರಿತು ಸಾಮಾಜಿಕ ಕಾರ್ಯಕರ್ತರೊಬ್ಬರು ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಇಂದು ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಅಶೋಕ ಭೂಷಣ್ ಮತ್ತು ಎಂ.ಆರ್. ಶಾ ಅವರಿದ್ದ ನ್ಯಾಯಪೀಠ, ವಲಸೆ ಕಾರ್ಮಿಕರಿಗೆ ಆಹಾರ ಭದ್ರತೆ, ಹಣ ವರ್ಗಾವಣೆ, ಸಾರಿಗೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಅವರಿಗೆ ತೊಂದರೆಯಾಗದಂತೆ ಛತ್ರ (ಸಮುದಾಯದ ಅಡುಗೆ ಮನೆಗಳು)ಗಳನ್ನು ನಿರ್ಮಿಸಿ ಊಟ ಒದಗಿಸಬೇಕು. ಊರುಗಳಿಗೆ ಮರಳಲು ಸಿದ್ಧವಿರುವವರಿಗೆ ಸಾರಿಗೆ ವ್ಯವಸ್ಥೆಯನ್ನು ಒದಗಿಸಬೇಕು ಎಂದು ನಿರ್ದೇಶಿಸಿದೆ.