ನವದೆಹಲಿ: "ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ, ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಬಗ್ಗೆ ಮಾತನಾಡಿದರೆ ಜೈಲಿಗೆ ಹೋಗಬೇಕಾಗುತ್ತದೆ. ಇದಕ್ಕೆ ನಾವು ಸಿದ್ಧರಾಗಬೇಕು. ಜನರು ಆಮ್ ಆದ್ಮಿ ಪಕ್ಷಕ್ಕೆ ಮೊದಲು ದೆಹಲಿಯಲ್ಲಿ ಮತ್ತು ನಂತರ ಪಂಜಾಬ್‌ನಲ್ಲಿ ಅವಕಾಶ ನೀಡಿದರು. ನಾವು ಮಾಡಿದ ಕೆಲಸವನ್ನು ಯಾವ ಪಕ್ಷವೂ ಮಾಡಿಲ್ಲ. ನಾವು ಶಿಕ್ಷಣ, ಆರೋಗ್ಯ, ವಿದ್ಯುತ್, ಹಣದುಬ್ಬರ ಮತ್ತು ಉದ್ಯೋಗದ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದೇವೆ, ಇದನ್ನು ಬೇರಾವುದೇ ಪಕ್ಷಗಳು ಮಾಡಲಿಲ್ಲ" ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು.
ಶನಿವಾರ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಮತ್ತು 12ನೇ ರಾಷ್ಟ್ರೀಯ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವರ್ಚುವಲ್ ಮಾಧ್ಯಮದ ಮೂಲಕ ನಡೆದ ಎರಡೂ ಸಭೆಗಳಲ್ಲಿ ದೇಶಾದ್ಯಂತ ಪಕ್ಷದ ಕಾರ್ಯಕರ್ತರು, ಪಂಜಾಬ್ ಸಿಎಂ ಭಗವಂತ್ ಮಾನ್ ಮತ್ತು ರಾಷ್ಟ್ರೀಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಾ.ಸಂದೀಪ್ ಪಾಠಕ್ ಭಾಗವಹಿಸಿದ್ದರು.
"ಕಳೆದ ಹನ್ನೆರಡು ವರ್ಷಗಳಲ್ಲಿ ಆಮ್ ಆದ್ಮಿ ಪಕ್ಷವು ಅಭೂತಪೂರ್ವ ಯಶಸ್ಸು ಕಂಡಿದೆ. 75 ವರ್ಷಗಳಲ್ಲಿ ಇತರೆ ಪಕ್ಷಗಳು ಮಾಡಲಾಗದ ಕೆಲಸವನ್ನು ನಾವು ಮಾಡಿದ್ದೇವೆ. ಕಳೆದ ಎರಡು ವರ್ಷಗಳಲ್ಲಿ ಪಂಜಾಬ್‌ನಲ್ಲಿ ಎಎಪಿ ಸರ್ಕಾರ ಮಾಡಿದ ಮಾದರಿ ಕೆಲಸವನ್ನು ನೋಡಿದರೆ, ನಾವು ಇನ್ನೂ ವೇಗವಾಗಿ ಕೆಲಸ ಮಾಡಬಹುದು ಎಂಬುದನ್ನು ತೋರಿಸುತ್ತದೆ" ಎಂದು ಕೇಜ್ರಿವಾಲ್ ತಿಳಿಸಿದರು.