ಕೊಲ್ಹಾಪುರ: ಮಹಾರಾಷ್ಟ್ರಕ್ಕೆ ವಾರದೊಳಗೆ ಲಸಿಕೆಗಳ ಪೂರೈಕೆ ಹೆಚ್ಚಿಸದಿದ್ದರೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಇತರ ರಾಜ್ಯಗಳಿಗೆ ಲಸಿಕೆ ಸಾಗಿಸುವ ವಾಹನಗಳನ್ನು ತಡೆಯುತ್ತೇವೆ ಎಂದು ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ಮುಖಂಡ ರಾಜು ಶೆಟ್ಟಿ ಹೇಳಿದ್ದಾರೆ.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರಕ್ಕೆ ಹೆಚ್ಚುವರಿ ಲಸಿಕೆಗಳನ್ನು ಕೇಂದ್ರ ಒದಗಿಸದಿದ್ದರೇ ಸಂಘನೆಯ ವತಿಯಿಂದ ಲಸಿಕೆ ತಯಾರಿಸುವ ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಘೇರಾವ್ ಹಾಕಲಾಗುವುದು ಎಂದು ಎಚ್ಚರಿಕೆ ರವಾನಿಸಿದರು.
ಸೀರಮ್ ಸಂಸ್ಥೆ ಮಾತ್ರವಲ್ಲದೇ ಇತರ ರಾಜ್ಯಗಳಿಗೆ ಲಸಿಕೆ ಸರಬರಾಜನ್ನು ಸಹ ನಿರ್ಬಂಧಿಸುತ್ತೇವೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದೇನೆ ಎಂದರು.
ಕೋವಿಡ್ ಸೋಂಕು ತ್ವರಿತ ಏರಿಕೆಯೊಂದಿಗೆ ರಾಜ್ಯವು ಹಿಡಿತ ಸಾಧಿಸುತ್ತಿರುವ ಸಮಯದಲ್ಲಿ ಕೇಂದ್ರವು ಮಹಾರಾಷ್ಟ್ರದ ಬಗ್ಗೆ ತಾರತಮ್ಯ ಮನೋಭಾವ ಏಕೆ ತೋರಿಸುತ್ತಿದೆ? ಎಂದು ಪ್ರಶ್ನಿಸಿದ ಅವರು, ಲಸಿಕೆ ಡೋಸ್ ಕೊರತೆಯಿಂದಾಗಿ ರಾಜ್ಯದ ಹೆಚ್ಚಿನ ಲಸಿಕೆ ವಿತರಣಾ ಕೇಂದ್ರಗಳು ಸ್ಥಗಿತಗೊಂಡಿವೆ ಎಂದು ಆರೋಪಿಸಿದರು.