ನವದೆಹಲಿ: ಭಾರತದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದು ಪರಿಗಣಿಸಲ್ಪಟ್ಟಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮುಕ್ತಾಯದ ಸನಿಹದಲ್ಲಿರುವ ವೇಳೆ ಯೂಟ್ಯೂಬ್ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ಆಹಾರ, ಮದುವೆ, ಮೊದಲ ಕೆಲಸ ಹಾಗೂ ಕುಟುಂಬದ ಕುರಿತಾಗಿ ಮುಕ್ತವಾಗಿ ಮಾತನಾಡಿದ್ದಾರೆ. ಈ ವೇಳೆ ಮದುವೆಯ ಕುರಿತಾದ ಪ್ರಶ್ನೆಗಳಿಗೆ ನಗುತ್ತಾ ಉತ್ತರವನ್ನು ನೀಡಿದ್ದಾರೆ.
ಹುಡುಗಿ ಹೀಗಿರಬೇಕಂತೆ..ಸಂದರ್ಶನದಲ್ಲಿ ನೀವು ಶೀಘ್ರದಲ್ಲೇ ಮದುವೆಯಾಗಲು ಯೋಜಿಸುತ್ತಿದ್ದೀರಾ? ನಿಮ್ಮ ಮದುವೆಯ ಬಗ್ಗೆ ಯೋಚನೆ ಇಲ್ಲವೇ ಎಂದು ಸಂದರ್ಶಕಿ ಕೇಳಿದರು. ಅದಕ್ಕೆ ರಾಹುಲ್ ಗಾಂಧಿ "ನನಗೆ ಸರಿಯಾದ ಹುಡುಗಿ ಸಿಕ್ಕಾಗ ನಾನು ಮದುವೆಯಾಗುತ್ತೇನೆ. ಅಪಾರ ಪ್ರೀತಿ ಹಾಗೂ ಬುದ್ಧಿವಂತಿಕೆ ಹೊಂದಿರುವ ಯುವತಿ ಆಗಿರಬೇಕು ಎನ್ನುವುದೊಂದೇ ನನ್ನ ಷರತ್ತು. ನನ್ನ ಪೋಷಕರ ವಿವಾಹ ಅತ್ಯದ್ಬುತವಾಗಿತ್ತು. ಅದಕ್ಕಾಗಿಯೇ ನನಗೆ ಮದುವೆಯ ಬಗ್ಗೆ ಹೆಚ್ಚಿನ ಆಲೋಚನೆಗಳಿವೆ. ನಾನು ಕೂಡ ಅಂತಹ ಜೀವನ ಸಂಗಾತಿಯನ್ನು ಹುಡುಕುತ್ತಿದ್ದೇನೆ" ಎಂದು ಉತ್ತರಿಸಿದರು.
ಹಲಸು, ಬಠಾಣಿ ತಿನ್ನಲ್ಲ:ನನಗೆ ಹಲಸು ಮತ್ತು ಬಟಾಣಿ ಇಷ್ಟವಿಲ್ಲ. ನಾನು ಮನೆಯಲ್ಲಿದ್ದಾಗ, ಏನು ತಿನ್ನುತ್ತೇನೆ ಮತ್ತು ಕುಡಿಯುತ್ತೇನೆ ಎಂಬುದರ ಬಗ್ಗೆ ತುಂಬಾ ಕಟ್ಟುನಿಟ್ಟಾಗಿರುತ್ತೇನೆ. ನನಗೆ ಇಲ್ಲಿ ಯಾವುದೇ ಆಯ್ಕೆ ಇಲ್ಲ. ಪ್ರಯಾಣ ಮಾಡುವಾಗ ಸಿಕ್ಕಿದ್ದನ್ನೆಲ್ಲ ತಿನ್ನುತ್ತೇನೆ. ತೆಲಂಗಾಣದ ಜನರು ಆಹಾರದಲ್ಲಿ ಮೆಣಸಿನಕಾಯಿಯನ್ನು ಹೆಚ್ಚು ತಿನ್ನುತ್ತಾರೆ. ಅಲ್ಲಿ ಸ್ವಲ್ಪ ಊಟ-ತಿಂಡಿ ಕಷ್ಟವಾಗಿತ್ತು. ನಾನು ಹುಟ್ಟಿದ್ದು ಉತ್ತರ ಪ್ರದೇಶಕ್ಕೆ ವಲಸೆ ಬಂದ ಕಾಶ್ಮೀರಿ ಪಂಡಿತರ ಮನೆಯಲ್ಲಿ. ಅಪ್ಪನ ತಂದೆ ಪಾರ್ಸಿ. ಮಧ್ಯಾಹ್ನದ ಊಟಕ್ಕೆ ದೇಶಿ ಆಹಾರವನ್ನು ನೀಡಲಾಗುತ್ತಿದ್ದರೆ, ರಾತ್ರಿ ಊಟಕ್ಕೆ ಕಾಂಟಿನೆಂಟಲ್ ಆಹಾರವನ್ನು ತಯಾರಿಸಲಾಗುತ್ತಿತ್ತು. ಐಸ್‌ಕ್ರೀಮ್ ನನಗೆ ಬಹಳ ಇಷ್ಟ. ಇನ್ನು, ತಂದೂರಿ ಆಹಾರವನ್ನು ಬಹಳ ಇಷ್ಟಪಟ್ಟು ತಿನ್ನುತ್ತೇನೆ. ಚಿಕನ್ ಟಿಕ್ಕಾ, ಸೀಖ್ ಕಬಾಬ್ ಮತ್ತು ಆಮ್ಲೆಟ್ ಫೇವರಿಟ್ ಆಹಾರಗಳು ಅನ್ನೋದನ್ನು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಭದ್ರತೆಯ ಕಾರಣದಿಂದ ಶಾಲೆಗೆ ಹೋಗುತ್ತಿರಲಿಲ್ಲ: ನಾನು ಬೋರ್ಡಿಂಗ್ ಶಾಲೆಯಲ್ಲಿ ಓದಿದ್ದೆ. ಆದರೆ, ಅಜ್ಜಿ ಕೊಲೆಯಾಗುವ ಮುನ್ನ ಬೋರ್ಡಿಂಗ್ ಶಾಲೆಯಿಂದ ನಮ್ಮನ್ನು ಬಿಡಿಸಲಾಗಿತ್ತು. ಆ ಬಳಿಕ ನಮಗೆ ಹೋಮ್ ಸ್ಕೂಲಿಂಗ್ ನಡೆಯುತ್ತಿತ್ತು. ಭದ್ರತೆಯ ದೃಷ್ಟಿಯಿಂದ ನಮಗೆ ಶಾಲೆಗೆ ಹೋಗಲು ಅನುಮತಿ ನೀಡುತ್ತಿರಲಿಲ್ಲ. ನಾನು ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಹಲವು ವರ್ಷಗಳ ಕಾಲ ಇದ್ದೆ. ಅಲ್ಲಿ ನಾನು ಇತಿಹಾಸವನ್ನು ಅಧ್ಯಯನ ಮಾಡಿದೆ. ಇದರ ನಂತರ ನಾನು ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ಹೋದೆ. ಅಲ್ಲಿ ನಾನು ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ರಾಜಕೀಯವನ್ನು ಓದಿದೆ. ಆಗ ತಂದೆ ತೀರಿಕೊಂಡರು. ಇದರ ನಂತರ ನಾನು ಅಮೆರಿಕದ ರೋಲಿನ್ಸ್ ಕಾಲೇಜಿಗೆ ಹೋದೆ. ಅಲ್ಲಿ ನಾನು ಅಂತಾರಾಷ್ಟ್ರೀಯ ಸಂಬಂಧಗಳು, ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದ್ದೇನೆ. ನಾನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.