ಕೋಲ್ಕತ್ತಾ(ಪಶ್ಚಿಮ ಬಂಗಾಳ):ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ, ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ರಾಜಕೀಯ ಸೇರಿಕೊಳ್ಳಲಿದ್ದಾರೆ ಎಂಬ ಮಾತು ಈ ಹಿಂದಿನಿಂದಲೂ ಕೇಳಿ ಬರ್ತಿದೆ. ಆದರೆ, ಇಲ್ಲಿಯವರೆಗೆ ದಾದಾ ಮಾತ್ರ ಇದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.
ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳ ಪ್ರವಾಸದ ವೇಳೆ ಸೌರವ್ ಗಂಗೂಲಿ ನಿವಾಸಕ್ಕೆ ತೆರಳಿ, ಔತಣಕೂಟದಲ್ಲಿ ಭಾಗಿಯಾಗುತ್ತಿದ್ದಂತೆ ಈ ಚರ್ಚೆ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಗಂಗೂಲಿ ಮತ್ತು ಅವರ ಪತ್ನಿ ಡೋನಾ ಇಂದು ಬೆಳಗ್ಗೆ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ಗಂಗೂಲಿ ಸಕ್ರಿಯ ರಾಜಕಾರಣಕ್ಕೆ ಬರುವ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದು, ಈ ವೇಳೆ ಡೋನಾ ಮಾತನಾಡಿದರು.
ಊಹಿಸುವುದು ಜನರ ಕೆಲಸ, ಅಂತಹದ್ದೇನಾದ್ರೂ ಆದರೆ ಅದು ಪ್ರತಿಯೊಬ್ಬರಿಗೂ ತಿಳಿಯಲಿದೆ. ಆದರೆ, ಸೌರವ್ ಅವರೇನಾದ್ರೂ ರಾಜಕೀಯಕ್ಕೆ ಬಂದರೆ ಉತ್ತಮ ಕೆಲಸ ಮಾಡುತ್ತಾರೆ. ಜೊತೆಗೆ ಜನರ ಕಲ್ಯಾಣ ಕಾರ್ಯ ಮಾಡುತ್ತಾರೆಂದು ನಾನು ಹೇಳಬಲ್ಲೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಅಂತರ್ಜಾತಿ ವಿವಾಹ: ಪತಿ ಜೊತೆ ವಾಸವಿದ್ದ ಯುವತಿಯನ್ನ ಎಳೆದೊಯ್ದ ಕುಟುಂಬಸ್ಥರು!
ಅಮಿತ್ ಶಾ ಅವರೊಂದಿಗಿನ ಔತಣಕೂಟದ ವೇಳೆ ರಾಜಕೀಯದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಡೋನಾ ತಿಳಿಸಿದ್ದು, ಪಶ್ಚಿಮ ಬಂಗಾಳ ಸಿಎಂ ಜೊತೆ ನಮ್ಮ ಕುಟುಂಬ ತುಂಬಾ ಆತ್ಮೀಯವಾಗಿದೆ ಎಂದಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯ ಸಾರಿಗೆ ಸಚಿವ ಮತ್ತು ಕೋಲ್ಕತ್ತಾ ಮುನ್ಸಿಪಲ್ ಕಾರ್ಪೋರೇಷನ್ ಮೇಯರ್ ಫಿರ್ಹಾದ್ ಹಕೀಮ್ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ವೇಳೆ ಸೌರವ್ ಗಂಗೂಲಿ ಭಾರತೀಯ ಜನತಾ ಪಾರ್ಟಿ ಸೇರಿಕೊಳ್ಳಿದ್ದಾರೆಂಬ ಮಾತು ಕೇಳಿ ಬಂದಿತ್ತು. ಆದರೆ, ಲಘು ಹೃದಯಾಘಾತಕ್ಕೊಳಗಾಗಿದ್ದ ಕಾರಣ ಅವರು, ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ಯಾವುದೇ ರೀತಿಯ ಮಾತುಕತೆ ನಡೆದಿರಲಿಲ್ಲ. ಇದೀಗ ಮತ್ತೊಮ್ಮೆ ಅವರ ರಾಜಕೀಯ ಸೇರುವ ವಿಷಯ ಚರ್ಚೆಗೆ ಬಂದಿದೆ. ವಿಶೇಷವೆಂದರೆ 2015ರಿಂದಲೂ ಗಂಗೂಲಿ ರಾಜಕೀಯ ಸೇರಿಕೊಳ್ಳುತ್ತಾರೆ ಎಂಬ ಚರ್ಚೆ ನಡೆಯುತ್ತಲೇ ಇದೆ.
ಇನ್ನೂ ಔತಣಕೂಟದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ಗಂಗೂಲಿ, ಇದನ್ನ ರಾಜಕೀಯವಾಗಿ ನೋಡಬಾರದು ಎಂಬ ಮಾತು ತಿಳಿಸಿದ್ದರು.